ಜಿಲ್ಲೆ

ತ್ರಿವರ್ಣದೊಂದಿಗೆ ಕಂಗೊಳಿಸುತ್ತಿದೆ ಐತಿಹಾಸಿಕ ಕೋಟೆ

ಚಿತ್ರದುರ್ಗ: ದೇಶದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಐತಿಹಾಸಿಕ ಕಲ್ಲಿನಕೋಟೆ ದ್ವಾರ ಸೇರಿ ಇನ್ನಿತರೆ ಪ್ರಮುಖ ಸ್ಥಳಗಳು ಕೇಸರಿ, ಬಿಳಿ, ಹಸಿರು ತ್ರಿವರ್ಣದೊಂದಿಗೆ ಮನಮೋಹಕವಾಗಿ ಕಂಗೊಳಿಸುತ್ತಿದೆ.

ಒಳಗಣ್ಣಿನಿಂದ ಸೂಕ್ಷ್ಮವಾಗಿ ಗಮನಿಸಿದರೆ, ಇಂಡಿಯಾ ಗೇಟ್ ಮಾದರಿಯಂತೆ ಭಾಸವಾಗಿ ದೇಶಾಭಿಮಾನ ಮೂಡಿಸುತ್ತಿದೆ.

ತ್ರಿವರ್ಣ ಬೆಳಕಿನ ಪರಿಣಾಮ ಬೃಹತ್ ಕಲ್ಲುಗಳ ಮೇಲೆ ಕೆತ್ತಿರುವ ನಾಗರಹಾವು, ಬಸವನ ಮೂರ್ತಿ ಹೊನಲು-ಬೆಳಕಿನಲ್ಲಿ ಆಕರ್ಷಣೀಯವಾಗಿ ಕಾಣಿಸುತ್ತಿದ್ದು, ಏಳುಸುತ್ತಿನ ಕೋಟೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಕೈ ಬೀಸಿ ಕರೆಯುತ್ತಿದೆ.

ಪಕ್ಕದಲ್ಲಿನ ಐತಿಹಾಸಿಕ ಕಾಮನಬಾವಿಯಲ್ಲಿನ ನೀರಿನ ಮೇಲೂ ತ್ರಿವರ್ಣದ ಪ್ರತಿಬಿಂಬ ಮೂಡಿದೆ. ಕೇಂದ್ರ ಸರ್ಕಾರದ ಆದೇಶದನ್ವಯ ಐತಿಹಾಸಿಕ, ಪಾರಂಪರಿಕ ಸ್ಥಳಗಳಲ್ಲಿ ಈ ರೀತಿಯ ಲೈಟಿಂಗ್ ಎಫೆಕ್ಟ್ ಅನ್ನು ಪ್ರಾಚೀನ ಪುರಾತತ್ವ ಇಲಾಖೆಯಿಂದ ನೀಡಲಾಗಿದ್ದು, ಕೋಟೆ ದ್ವಾರವನ್ನು ಕಳೆದ ಐದಾರು ದಿನಗಳಿಂದ ಹೊರಗಿನಿಂದಲೇ ಜನ ಸೊಬಗನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ.

ಹರ್ ಘರ್ ತಿರಂಗಾ ಯಶಸ್ವಿ: ಹರ್ ಘರ್ ತಿರಂಗಾ ಅಭಿಯಾನ ಜಿಲ್ಲಾದ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಬೈಕ್ ರ್ಯಾಲಿ, ತಿರಂಗಾ ಯಾತ್ರೆ ಸೇರಿ ವಿವಿಧ ರೀತಿಯ ಜಾಥಾ ಆಯೋಜಿಸುವ ಮೂಲಕ ಯುವಸಮೂಹದವರಲ್ಲಿ ದೇಶಾಭಿಮಾನ ಮೂಡಿಸುವ ಕಾರ್ಯಕ್ರಮಗಳು ಜಿಲ್ಲಾಡಳಿತದಿಂದ ನಡೆದಿವೆ.