ನಂಜನಗೂಡು: ಕಸ, ತ್ಯಾಜ್ಯದ ಗಬ್ಬುವಾಸನೆ ತಾಳಲಾರದೆ ಮೂಗು ಮುಚ್ಚಿ ಓಡಾಡುವ ದುಸ್ಥಿತಿಯಲ್ಲಿದ್ದ ಬಡಾವಣೆಯ ನಿವಾಸಿಗಳಿಗೆ ಹಸಿರಿನ ವಾತಾವರಣ ನಿರ್ಮಿಸಿ, ಬಡಾವಣೆಯನ್ನು ನಿರ್ಮಲವಾಗಿಡುವ ಮೂಲಕ ನಗರಸಭಾ ಸದಸ್ಯರೊಬ್ಬರು ಮಾದರಿಯಾಗಿದ್ದಾರೆ.
ನಗರದ 13ನೇ ವಾರ್ಡ್ ವ್ಯಾಪ್ತಿಯ ರಾಷ್ಟ್ರಪತಿ ರಸ್ತೆ ಹಾಗೂ ನರಸೇಗೌಡ ಮುಖ್ಯರಸ್ತೆಗೆ ಸೇರಿದ ಶ್ರೀಕಂಠಪುರಿ ಬಡಾವಣೆಯ ಆಯ್ದ ಸ್ಥಳಗಳಲ್ಲಿ ಜನರು ಬೀಸಾಡುತ್ತಿದ್ದ ತ್ಯಾಜ್ಯ, ಕಸ-ಕಡ್ಡಿಯಿಂದ ಸುತ್ತಮುತ್ತಲಿನ ನಿವಾಸಿಗಳು ಗಬ್ಬು ವಾಸನೆ ತಾಳಲಾರದೆ ಮೂಗು ಮುಚ್ಚಿ ಓಡಾಡುವಂತಾಗಿತ್ತು. ಮಳೆಗಾಲದಲ್ಲಿ ರಸ್ತೆಬದಿಯಲ್ಲಿ ಎಸೆಯಲ್ಪಟ್ಟ ಕಸ-ಕಡ್ಡಿ ಚರಂಡಿ ಸೇರ್ಪಡೆಯಾಗಿ ನೀರು ಸರಾಗವಾಗಿ ಹರಿಯದಂತೆ ತಡೆಯೊಡ್ಡುತ್ತಿತ್ತು. ರಸ್ತೆಗಳ ಮೂಲೆಯಲ್ಲಿ ಎಸೆಯುತ್ತಿದ್ದ ಕಸವನ್ನು ಬಿಡಾಡಿ ದನಗಳು ಹಾಗೂ ನಾಯಿಗಳು ಎಳೆದಾಡಿ ಇಡೀ ಪ್ರದೇಶವನ್ನೇ ಕುಲುಷಿತಗೊಳಿಸುತ್ತಿದ್ದವು.
ಈ ವಾರ್ಡ್‌ನ ನಗರಸಭಾ ಸದಸ್ಯೆ ಶ್ವೇತಲಕ್ಷ್ಮೀ ಸತೀಶ್‌ಗೌಡ ಅವರು ಜನರಿಗೆ ಎಲ್ಲೆಂದರಲ್ಲಿ ಕಸ ಎಸೆಯದಂತೆ ಮನವರಿಕೆ ಮಾಡಿಕೊಟ್ಟರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಕಸ ಬೀಳುತ್ತಿದ್ದ ಸ್ಥಳವನ್ನೇ ಅಭಿವೃದ್ಧಿಪಡಿಸಲು ಪಣತೊಟ್ಟು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಲ್ಲಿ ಅವರೀಗ ಯಶಸ್ವಿಯಾಗಿದ್ದಾರೆ.
ಕಸ, ಕಡ್ಡಿ ಹಾಗೂ ಅನುಪಯುಕ್ತ ತ್ಯಾಜ್ಯಗಳ ಸಂಗ್ರಹ ತಾಣವಾಗಿದ್ದ ರಸ್ತೆಯಂಚಿನ ಮೂಲೆ ಹಾಗೂ ತಿರುವು ಪ್ರದೇಶದ ಸ್ಥಳವನ್ನು ಶ್ವೇತಲಕ್ಷ್ಮೀ ಹಾಗೂ ಅವರ ಪತಿ ಸತೀಶ್‌ಗೌಡ ಆಸಕ್ತಿ ವಹಿಸಿ ಕಿರು ಉದ್ಯಾನವನ್ನಾಗಿ ಪರಿವರ್ತಿಸಿದ್ದಾರೆ. ಕಸ ಬೀಳುತ್ತಿದ್ದ ಸ್ಥಳದಲ್ಲಿ ಮೂಗು ಮುಚ್ಚಿ ತೆರಳುತ್ತಿದ್ದ ಜನರು ಇದೀಗ ಕಿರುಉದ್ಯಾನವನದಲ್ಲಿ ಅರಳಿರುವ ಹೂಗಳನ್ನು ಗಮನಿಸುವಂತೆ ಮಾಡುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಿರುಉದ್ಯಾನವಾಗಿ ಪರಿವರ್ತನೆ
ಮುಖ್ಯರಸ್ತೆಗೆ ಹೊಂದಿಕೊಂಡಂತೆ ತ್ಯಾಜ್ಯದ ಅಂಗಳವಾಗಿ ಮಾರ್ಪಾಟಾಗಿದ್ದ ನಾಲ್ಕು ಕಿರಿದಾದ ಪ್ರದೇಶವನ್ನು ಗುರುತಿಸಿ ಸ್ಥಳೀಯವಾಗಿ ಲಭ್ಯವಿರುವ ಅನುಪಯುಕ್ತ ಟೈಕರ್‌ಗಳು, ತೆಂಗಿನ ಮರದ ಬುಡ, ಇಟ್ಟಿಗೆ ಹಾಗೂ ಕಲ್ಲಿನ ಕಂಬಗಳನ್ನು ಬಳಸಿಕೊಂಡು ಸುತ್ತಲಿನ ಪ್ರದೇಶಕ್ಕೆ ಬಣ್ಣ ಬಳಿದು ಕಿರು ಉದ್ಯಾನವನ್ನಾಗಿ ಪರಿವರ್ತಿಸಿದ್ದಾರೆ. ಜತೆಗೆ ನಗರಸಭೆಯ ಸ್ವಚ್ಛತಾ ಸಿಬ್ಬಂದಿ ಸಹಕಾರದೊಂದಿಗೆ ಈ ಪ್ರದೇಶದಲಿ ್ಲಅಲಂಕಾರಿಕ ಹಾಗೂ ಹೂವಿನ ಗಿಡಗಳನ್ನು ನೆಟ್ಟು ಕಸ ಬೀಳುತ್ತಿದ್ದ ಪ್ರದೇಶದಲ್ಲಿ ಅಚ್ಚ ಹಸಿರಿನ ಲಾನ್ ಬೆಳೆಸಲಾಗಿದೆ. ಇದರಿಂದಾಗಿ ಗಬ್ಬುನಾರುತ್ತಿದ್ದ ಪ್ರದೇಶವೀಗ ಆಕರ್ಷಕ ತಾಣವಾಗಿದೆ. ಸದ್ಯ ಜನರು ಕಸ ಎಸೆಯದೆ ಗಿಡಗಳಿಗೆ ನೀರೆರೆಯುವ ಮೂಲಕ ನಗರಸಭಾ ಸದಸ್ಯೆಯ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ.
ಗಿಡಗಳು ಆಕರ್ಷಣೆ: ವಾರ್ಡ್ ವ್ಯಾಪ್ತಿಯ ನರಸೇಗೌಡ ಮುಖ್ಯರಸ್ತೆ ಸೇರಿದಂತೆ ಆಯ್ದ ಪ್ರದೇಶಗಳಲ್ಲಿ 70 ಗಿಡಗಳನ್ನು ನೆಟ್ಟು ಪೋಷಿಸಿರುವ ನಗರಸಭಾ ಸದಸ್ಯೆ ಶ್ವೇತಲಕ್ಷ್ಮೀ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮಗಳನ್ನು ವಾರ್ಡ್ ವ್ಯಾಪ್ತಿಯಲ್ಲಿ ಆಯೋಜಿಸಿ ಗಿಡ-ಮರಗಳನ್ನು ಬೆಳೆಸಲು ನಾಗರಿಕರನ್ನು ಪ್ರೋತ್ಸಾಹಿಸಿದ್ದಾರೆ. ಇದರೊಂದಿಗೆ ವಾರ್ಡ್ ವ್ಯಾಪ್ತಿಯ ನಿವಾಸಿಗಳಿಗೆ ಕಸ ವಿಂಗಡಣೆಯ ಮಹತ್ವವನ್ನು ತಿಳಿಸಿಕೊಡುವ ಮೂಲಕ ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.