ಸಿದ್ದಾಪುರ ಪಟ್ಟಣದ ರಸ್ತೆ ಬದಿಯಲ್ಲಿ ಕಸದ ರಾಶಿ. 
ಜಿಲ್ಲೆ

ತ್ಯಾಜ್ಯ ಸಮಸ್ಯೆಗೆ ಮುಕ್ತಿ ಎಂದು?

ಸಿದ್ದಾಪುರ: ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಿದ್ದಾಪುರ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷೃ ಧೋರಣೆ ತಾಳಿದ್ದಾರೆ. ಇದರಿಂದ ತ್ಯಾಜ್ಯ ರಾಶಿಯೇ ಬಿದ್ದಿದ್ದು ದುರ್ವಾಸನೆ ಹೆಚ್ಚಾಗಿದೆ.

ಪಟ್ಟಣ, ಗ್ರಾಮಾಂತರ ಭಾಗ ಅಲ್ಲದೆ ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಬದಿಯಲ್ಲಿ ತ್ಯಾಜ್ಯದ ರಾಶಿ ಹೆಚ್ಚಾಗಿದೆ. ಇದರಿಂದಾಗಿ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ವಾಹನ ಸವಾರರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಜತೆಗೆ ಕಸದಿಂದಾಗಿ ಸೊಳ್ಳೆಗಳು, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿದ್ದು ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

ಶಾಶ್ವತವಾಗಿ ತ್ಯಾಜ್ಯ ವಿಲೇವಾರಿಗೆ ಸಿದ್ದಾಪುರ, ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯವಸ್ಥೆ ಮಾಡಿಕೊಳ್ಳದಿರುವುದರಿಂದ ಸಮಸ್ಯೆ ಎದುರಾಗಿದೆ. ಇದೆಲ್ಲದರ ನಡುವೆ ಜನಸಂಖ್ಯೆ ಹೆಚ್ಚುತ್ತಿದ್ದರೂ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದು ಸಮಸ್ಯೆ ಹೆಚ್ಚಾಗಲು ಮತ್ತೊಂದು ಕಾರಣ. ಈ ನಡುವೆ ರಸ್ತೆಯೇ ಡಸ್ಟ್‌ಬಿನ್‌ಗಳಾಗಿ ಮಾರ್ಪಟ್ಟಿದ್ದು, ನಿವಾಸಿಗಳ ಜತೆಗೆ ವಾಣಿಜ್ಯ ಮಳಿಗೆಗಳ ಕಸವೂ ರಸ್ತೆ ಬದಿ ಸುರಿಯುವುದರಿಂದ ನಾನಾ ಸಮಸ್ಯೆ ಎದುರಾಗಿವೆ.

ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆಗೆಂದು ಪ್ರತಿ ಮನೆಗೆ ಪಂಚಾಯಿತಿಯಿಂದ ಪ್ಲಾಸ್ಟಿಕ್ ಬಕೆಟ್ಗಳನ್ನು ನೀಡಿದ್ದರೂ ಅದನ್ನು ಸಂಗ್ರಹಣೆ ಮಾಡುವಲ್ಲಿ ಪಂಚಾಯಿತಿ ವಿಫಲವಾಗಿದೆ. ಆಟೋಗಳು ಬಾರದ ಕಾರಣ ನಾಗರಿಕರು ತಮ್ಮ ಮನೆಯಲ್ಲಿನ ಕಸವನ್ನು ಬೀದಿಗೆ ತಂದು ಬೀಸಾಡುತ್ತಿದ್ದಾರೆ. ಇದರಿಂದಾಗಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಮತ್ತು ವೃದ್ಧರು ರಸ್ತೆಯಲ್ಲಿ ಓಡಾಡಲು ಹಿಂಜರಿಯುವಂತಾಗಿದೆ.

ಜಾಗದ ಸಮಸ್ಯೆ: ಘಟ್ಟದಳ್ಳ ಬದಿಯಲ್ಲಿ ಸಿದ್ದಾಪುರ ಹಾಗೂ ಮಾಲ್ದಾರೆ ಪಂಚಾಯಿತಿಯ ಕಸ ವಿಲೇವಾರಿಗೆ ಜಾಗ ಗುರುತಿಸಲಾಗಿತ್ತು. ಆದರೆ ಜಾಗದ ಸಮೀಪ ತೋಡು ನೀರು ಹರಿಯುವುದರ ಜತೆಗೆ ಶಾಲೆ ಪಕ್ಕದಲ್ಲಿ ಇದೆ. ಹೀಗಾಗಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗವಲ್ಲ. ಜತೆಗೆ ಪರ್ಯಾಯ ಜಾಗ ಗುರುತಿಸಬೇಕು ಎಂದು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಹೀಗಾಗಿ, ಎರಡೂ ಗ್ರಾಪಂಗಳ ಬಳಿ ಸ್ವಂತ ಆಸ್ತಿ ಇಲ್ಲ. ಕಂದಾಯ ಇಲಾಖೆಗೆ ಸೇರಿದ ಜಮೀನುಗಳೇ ಅಧಿಕವಿದ್ದು, ವಿವಿಧ ಕಾರಣಗಳಿಂದಾಗಿ ಈ ಜಾಗ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸೂಕ್ತ ಜಾಗ ಕಂಡುಕೊಳ್ಳದೆ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತಿಲ್ಲ. ಅಲ್ಲದೇ, ಸೂಕ್ತ ಜಾಗ ಗುರುತಿಸಲು ಹಲವು ಗ್ರಾಮಸಭೆಗಳಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನ ಕಂಡುಬರುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಅರಣ್ಯದಂಚಿನಲ್ಲಿ ತ್ಯಾಜ್ಯ: ಕೋಳಿ ಮಾಂಸ ಮಾರುವ ಕೆಲವು ವ್ಯಾಪಾರಿಗಳು ಮಾಲ್ದಾರೆ ಮಾರ್ಗದ ಅರಣ್ಯದಂಚಿನ ರಸ್ತೆ ಬದಿಯಲ್ಲಿ ರಾತ್ರಿ ವೇಳೆ ಹೆಚ್ಚಾಗಿ ತ್ಯಾಜ್ಯ ಸುರಿಯುತ್ತಿದ್ದಾರೆ. ಇದರಿಂದಾಗಿ ಜಾನುವಾರುಗಳು ಹಾಗೂ ಕಾಡುಪ್ರಾಣಿಗಳ ಜೀವಕ್ಕೆ ಮಾರಕವಾಗಿದೆ. ಇತ್ತೀಚೆಗಷ್ಟೇ ರಸ್ತೆ ಹಾಗೂ ಅರಣ್ಯ ಬದಿಗಳಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ಜನಪರ ಸಂಘದ ಸದಸ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿದ್ದರು. ಇದೀಗ ಸಿದ್ದಾಪುರ ಭಾಗದಿಂದ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದ್ದು ಸುರಿಯುವವರ ವಿರುದ್ಧ ಅರಣ್ಯ, ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗಿದೆ.

ಶಾಲಾ ಆವರಣ ಬಳಿಯೇ ತ್ಯಾಜ್ಯವನ್ನು ಬೀಸಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದನ್ನು ತುಳಿದುಕೊಂಡು ಜ್ಞಾನ ದೇಗುಲ ಪ್ರವೇಶಿಸಬೇಕಿದೆ. ಸಿದ್ದಾಪುರ ಶಾಲೆ ಆವರಣದಲ್ಲಿ ಇಂತಹ ಪ್ರಸಂಗ ನಿತ್ಯ ಜರುಗುತ್ತಿದ್ದು, ವಿದ್ಯಾರ್ಥಿಗಳ ಪಾಲಕರು, ಸ್ಥಳೀಯರು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ. ಶಾಲಾ ಗೋಡೆ ಬದಿಗೆ ಕಸ ತಂದು ಸುರಿಯುತ್ತಿರುವದರಿಂದ ಬೀದಿ ನಾಯಿಗಳು ಬಂದು ಕೆದಕಿ ರಸ್ತೆ ಪೂರ್ತಿ ಹರಡುತ್ತಿವೆ.

ಘಟ್ಟದಳ್ಳದಲ್ಲಿ ಕಸ ವಿಲೇವಾರಿ ಘಟಕದ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳು ಜಾಗದ ಮೇಲೆ ದಾವೆ ಹೂಡಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಜಾಗ ಇಲ್ಲದ ಕಾರಣ ಸಮಸ್ಯೆಯಾಗಿದ್ದು, ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು.
ಅಪ್ಪಣ್ಣ ತಾಪಂ ಕಾರ್ಯನಿರ್ವಹಣಾಧಿಕಾರಿ ವಿರಾಜಪೇಟೆ

ಅರಣ್ಯದಂಚಿನ ಪಂಚಾಯಿತಿ ವ್ಯಾಪ್ತಿಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗದ ವ್ಯವಸ್ಥೆ ಮಾಡದಿರುವ ಕಾರಣದಿಂದ ಕೆಲವರು ರಾತೋರಾತ್ರಿ ವಾಹನಗಳಲ್ಲಿ ತ್ಯಾಜ್ಯವನ್ನು ಅರಣ್ಯದ ಬದಿಯಲ್ಲಿ ಸುರಿದು ಹೋಗುತ್ತಿದ್ದಾರೆ. ಈ ತ್ಯಾಜ್ಯ ವನ್ಯಪ್ರಾಣಿಗಳಿಗೆ ಅಪಾಯಕಾರಿಯಾಗಿದ್ದು, ಈಗಾಗಲೇ ಹಲವರಿಗೆ ದಂಡ ವಿಧಿಸಲಾಗಿದೆ. ಸಾರ್ವಜನಿಕರು ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆ ಮಾಡುವಲ್ಲಿ ಸಹಕಾರ ನೀಡಬೇಕು.
ಶಿವರಾಮ್ ವಲಯ ಅರಣ್ಯ ಅಧಿಕಾರಿ, ದುಬಾರೆ

ಈವರೆಗೆ ಆಡಳಿತ ನಡೆಸಿದವರು ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ತಾತ್ಕಾಲಿಕ ಕ್ರಮಕ್ಕೆ ಮಾತ್ರ ಮುಂದಾಗುತ್ತಿರುವುದು ಸಿದ್ದಾಪುರದ ದುರಂತ. ಸಮಸ್ಯೆ ಬಗ್ಗೆ ಕ್ಷೇತ್ರದ ನೂತನ ಶಾಸಕರ ಗಮನಕ್ಕೆ ತರಲಾಗಿದೆ. ಶಾಸಕರು ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳುತ್ತಾರೆಂಬ ವಿಶ್ಬಾಸವಿದೆ.
ಮುಸ್ತಾಫ ಸಾಮಾಜಿಕ ಕಾರ್ಯಕರ್ತ, ಸಿದ್ದಾಪುರ

ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪ್ರತಿಷ್ಠೆಗಾಗಿ ರಸ್ತೆ ಬದಿಯಲ್ಲಿ ಗುಂಡಿ ತೆಗೆದು ತ್ಯಾಜ್ಯ ವಿಲೇವಾರಿ ಮಾಡುತ್ತಿದೆ. ಇದರಿಂದ ದುಂದು ವೆಚ್ಚವಾಗುತ್ತಿದ್ದು, ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಅರಣ್ಯ ಮತ್ತು ಶಾಲಾ ಪರಿಸರದಲ್ಲಿ ತ್ಯಾಜ್ಯ ಹಾಕುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕಸವಿಲೇವಾರಿಗೆ ಬೇರೆ ಜಾಗ ದೊರಕಿಸಿಕೊಡಲಿ.
ಹನೀಫ್ ಸದಸ್ಯ, ಮಾಲ್ದಾರೆ ಗ್ರಾಮ ಪಂಚಾಯಿತಿ

ಕಸ ವಿಲೇವಾರಿಗೆ ಸೂಕ್ತ ಜಾಗವಿಲ್ಲದ ಕಾರಣ ಸಮಸ್ಯೆ ಹೆಚ್ಚಾಗುತ್ತಿದೆ. ಕೆಲವರು ರಸ್ತೆ ಬದಿಯಲ್ಲಿ ಕಸ ಸುರಿಯುತ್ತಿದ್ದು ಮೂಗು ಮುಚ್ಚಿಕೊಂಡು ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶೀಘ್ರ ಶಾಶ್ವತ ಜಾಗದ ವ್ಯವಸ್ಥೆ ಮಾಡಬೇಕಾಗಿದೆ.
ಬಾವ ಮಾಲ್ದಾರೆ ಅಧ್ಯಕ್ಷ, ಜನಪರ ಸಂಘಟನೆ