ಜಿಲ್ಲೆ

ತ್ಯಾಜ್ಯ ಸಂಗ್ರಹಕ್ಕಾಗಿ 5 ಹೊಸ ವಾಹನಗಳು

ಚಾಮರಾಜನಗರ: ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆಗಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅಡಿಯಲ್ಲಿ ಖರೀದಿಸಿರುವ 5 ಹೊಸ ವಾಹನಗಳಿಗೆ ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಶನಿವಾರ ಚಾಲನೆ ನೀಡಿದರು.

ನಗರದ ನಗರಸಭೆ ಕಚೇರಿಯ ಮುಂಭಾಗ ಹೊಸ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ 21 ಆಟೋಗಳು ಮತ್ತು 4 ಟ್ರ್ಯಾಕ್ಟರ್‌ಗಳನ್ನು ಒಂಗೊಂಡಂತೆ ಒಟ್ಟು 25 ವಾಹನಗಳಿದ್ದವು. ಇದರಲ್ಲಿ 10 ಕ್ಕಿಂತಲೂ ಹೆಚ್ಚು ವಾಹನಗಳು ಪದೇಪದೇ ರಿಪೇರಿಗೆ ಬರುತ್ತಿದ್ದವು. ಪರಿಣಾಮವಾಗಿ ಹಲವಾರು ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಸಮಸ್ಯೆ ಉಂಟಾಗುತ್ತಿತ್ತು. ಹಲವಾರು ಸಭೆಗಳಲ್ಲಿ ಈ ಕುರಿತು ನಗರಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ನಿಟ್ಟಿನಲ್ಲಿ ಬಡಾವಣೆಗಳಲ್ಲಿ ಹಸಿಕಸ-ಒಣಕಸವನ್ನು ಸಂಗ್ರಹ ಮಾಡಲು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ 5 ನೂತನ ವಾಹನಗಳನ್ನು ಖರೀದಿಸಲಾಗಿದೆ. ಒಂದು ವಾಹನಕ್ಕೆ ಅಂದಾಜು 9.30 ಲಕ್ಷ ರೂ, ನಂತೆ 5 ವಾಹನಗಳಿಗೆ 46.50 ಲಕ್ಷ ರೂ, ವೆಚ್ಚದಲ್ಲಿ ವಾಹನಗಳನ್ನು ಖರೀದಿ ಮಾಡಲಾಗಿದೆ. ಈ ಮೂಲಕ ನಗರಸಭೆಯ ಹಲವಾರು ವಾರ್ಡ್‌ಗಳಲ್ಲಿ ಉಂಟಾಗುತ್ತಿದ್ದ, ಕಸ ವಿಲೇವಾರಿ ಸಮಸ್ಯೆ ಸ್ವಲ್ಪವಾದರೂ ತಗ್ಗಲಿದೆ.

ನೂತನ ವಾಹನಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ನಗರಸಭಾ ಉಪಾಧ್ಯಕ್ಷೆ ಮಮತಾ ಬಾಲಸುಬ್ರಮ್ಮಣ್ಯಂ, ಸದಸ್ಯರಾದ ಎಂ.ಮಹೇಶ್, ಕಲೀಲ್ ಉಲ್ಲಾ, ತೌಸಿಯಾ ಭಾನು, ಕುಮುದಾ ಕೇಶವಮೂರ್ತಿ, ಶಿವರಾಜು, ಪೌರಾಯುಕ್ತ ರಾಮದಾಸ್, ಪರಿಸರ ಅಭಿಯಂತರಾದ ರೂಪ, ಹಿರಿಯ ಆರೋಗ್ಯ ನಿರೀಕ್ಷಕ ಮಂಜು ಹಾಗೂ ಇತರರು ಹಾಜರಿದ್ದರು.

ನಗರದ ಬಡಾವಣೆಗಳಲ್ಲಿ ಹಸಿ ಕಸ, ಒಣ ಕಸ ಸಂಗ್ರಹ ಮಾಡುವ ದೃಷ್ಟಿಯಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಹೊಸ ವಾಹನಗಳನ್ನು ಖರೀದಿಸಲಾಗಿದೆ. ನಗರದ ನಿವಾಸಿಗಳು ರಸ್ತೆ ಬದಿಗಳಲ್ಲಿ ಕಸವನ್ನು ಬಿಸಾಡದೇ ಕಸದ ವಾಹನಗಳಿಗೆ ನೀಡಬೇಕು.

-ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ

ನಗರದಲ್ಲಿ ಘನತ್ಯಾಜ್ಯವನ್ನು ಸಂಗ್ರಹ ಮಾಡುವ ನಿಟ್ಟಿನಲ್ಲಿ ನಗರಸಭೆಗೆ ವಾಹನಗಳನ್ನು ಹಸ್ತಾಂತರ ಮಾಡಲಾಗಿದೆ. ಸಾರ್ವಜನಿಕರು ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ವಾಹನಗಳಿಗೆ ನೀಡುವ ಮೂಲಕ ಇದರ ಸನುಕೂಲವನ್ನು ಪಡೆದುಕೊಳ್ಳಬೇಕು.

-ಸುರೇಶ್, ಅಧ್ಯಕ್ಷ, ನಗರಸಭೆ, ಚಾಮರಾಜನಗರ