ಜಿಲ್ಲೆ

ತ್ಯಾಜ್ಯ ವಿಲೇವಾರಿ ಜಾಗೃತಿ ಮೂಡಿಸಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಘನ ಹಾಗೂ ದ್ರವ ತ್ಯಾಜ್ಯದ ಸಮರ್ಪಕ ವಿಲೇವಾರಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಗರಾಜ ಮಠ ಹೇಳಿದರು.
ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಸ್ವಚ್ಛ ಹಾಗೂ ಬಯಲು ಬಹಿರ್ದೆಸೆ ಮುಕ್ತ ಅಭಿಯಾನ ಅಂಗವಾಗಿ ಇಲ್ಲಿಯ ಮೈಲೂರಿನಲ್ಲಿ ಇರುವ ಜಿಲ್ಲಾ ಪಂಚಾಯಿತಿಯ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಘನ ಹಾಗೂ ದ್ರವ ತ್ಯಾಜ್ಯ ಪ್ರತ್ಯೇಕ ವಿಂಗಡಿಸಿಯೇ ವಿಲೇವಾರಿ ಮಾಡಬೇಕು. ಅನೇಕ ತ್ಯಾಜ್ಯಗಳನ್ನು ಮರು ಬಳಕೆ ಕೂಡ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ,
ಗ್ರಾಮೀಣ ಭಾಗದ ಜನ ಖುದ್ದು ಅಡುಗೆ ಅನಿಲ ಉತ್ಪಾದನೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ಗೋಬರ್ ಗ್ಯಾಸ್ ಘಟಕ ಸ್ಥಾಪಿಸಿ, ದನ ಕರುಗಳ ಸೆಗಣಿ ಹಾಗೂ ಅನುಪಯುಕ್ತ ವಸ್ತುಗಳಿಂದ ಅಡುಗೆ ಅನಿಲ ಉತ್ಪಾದಿಸಬಹುದಾಗಿದೆ ಎಂದು ಹೇಳಿದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಈ ದಿಸೆಯಲ್ಲಿ ಪಂಚಾಯಿತಿ ಚುನಾಯಿತ ಪ್ರತಿಧಿಗಳು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ವಿದ್ಯಾರ್ಥಿಗಳಿಗೆ ಅರಿವು ನೀಡಬೇಕು ಎಂದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಮಾತನಾಡಿ, ಜಿಲ್ಲೆಯನ್ನು ಸ್ವಚ್ಛ ಹಾಗೂ ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಅಭಿಯಾನ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಲೆಕ್ಕ ಸಹಾಯಕ ಪ್ರವೀಣ ಸ್ವಾಮಿ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಶಿವಶಂಕರ ಬೆಳಮಗಿ ಅವರು ಅಸ್ವಚ್ಛತೆ ಮತ್ತು ಬಯಲು ಬಹಿರ್ದೆಸೆಯಿಂದ ಉಂಟಾಗುವ ದುಷ್ಪರಿಣಾಮ, ಸ್ವಚ್ಛ ಹಾಗೂ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ನಿರ್ಮಾಣದ ಅಗತ್ಯತೆ ಕುರಿತು ಉಪನ್ಯಾಸ ನೀಡಿದರು.
ವಿವಿಧ ತಾಲ್ಲೂಕುಗಳ ವಿವಿಧೊದ್ದೇಶ ಪುನರ್ವಸತಿ ಕಾರ್ಯಕರ್ತರಾದ ಬಾಬುರಾವ್ ರಾಠೋಡ್, ಸುನೀಲ್, ಜಗನ್ನಾಥ, ಬಸವರಾಜ, ಶಿವಕುಮಾರ ಪಾಟೀಲ ಮೊದಲಾದವರು ಇದ್ದರು.
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಪುನರ್ವಸತಿ ಕಾರ್ಯಕರ್ತರು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.