ಜಿಲ್ಲೆ

ತ್ಯಾಜ್ಯ ಮುಕ್ತ ಗ್ರಾಮವನ್ನಾಗಿಸಲು ಕೈಜೋಡಿಸಿ

ಸಿದ್ದಾಪುರ: ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಮುಕ್ತ ಗ್ರಾಮವನ್ನಾಗಿಸಲು ಗ್ರಾಮ ಪಂಚಾಯಿತಿಯೊಂದಿಗೆ ಕೈಜೋಡಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಸಲಹೆ ನೀಡಿದರು.

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಕಟ್ಟಡದ ಸಮೀಪ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕದ ಸ್ವಚ್ಛ ಸಂಕೀರ್ಣ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಶುಚಿತ್ವ ಹಾಗೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಸ್ವಚ್ಛ ಗ್ರಾಮವನ್ನಾಗಿಸಲು ಪ್ರತಿಯೊಬ್ಬರೂ ಪಂಚಾಯಿತಿಯೊಂದಿಗೆ ಕೈಜೋಡಿಸಬೇಕು. ಪ್ಲಾಸ್ಟಿಕ್, ತ್ಯಾಜ್ಯ ಮುಕ್ತವಾದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಸ್ವಚ್ಛ ಸಂಕೀರ್ಣ ಘಟಕ ಘನ ತ್ಯಾಜ್ಯ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದು ಹಸಿ ತ್ಯಾಜ್ಯವನ್ನು ಮನೆಯ ಆವರಣದಲ್ಲೇ ಗಿಡ-ಮರ ತೋಟದಲ್ಲಿ ಬಳಸಿಕೊಳ್ಳಿ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯದಂತೆ ಸಿಸಿ ಕ್ಯಾಮರಾ ಅಳವಡಿಸಿ ನಿಗಾವಹಿಸುವ ಮೂಲಕ ಎಚ್ಚರ ವಹಿಸಬೇಕು. ತ್ಯಾಜ್ಯ ಸಂಗ್ರಹಕ್ಕಾಗಿ ಮತ್ತೊಂದು ವಾಹನದ ಅವಶ್ಯಕತೆ ಇದ್ದು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು. ಕ್ಷೇತ್ರ ವ್ಯಾಪ್ತಿಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕ ನಿರ್ಮಾಣವಾಗಿದ್ದು ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮೀ ಮಾತನಾಡಿ, ಶಾಸಕ ಡಾ.ಮಂತರ್ ಗೌಡ ಅವರ ಸಹಕಾರದಿಂದ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಮತ್ತಷ್ಟು ಅಭಿವೃದ್ಧಿಗೆ ಪಂಚಾಯಿತಿ ಮುಂದಾಗಿದೆ ಎಂದರು.

ಮಾಜಿ ಅಧ್ಯಕ್ಷ ಸಾಬು ವರ್ಗೀಸ್ ಮಾತನಾಡಿ, ಈ ಹಿಂದೆ ಅಧ್ಯಕ್ಷರಾಗಿದ್ದಾಗ 2021-22ರ ಅವಧಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿತ್ತು. ಘನತ್ಯಾಜ್ಯ ನಿರ್ವಹಣೆಗಾಗಿ ಆಡಳಿತ ಮಂಡಳಿ ನಿರ್ಣಯದಂತೆ ಗ್ರಾಮ ಪಂಚಾಯಿತಿ ನಿಧಿಯಿಂದ ಯೋಜನೆ ರೂಪಿಸಲಾಗಿ ಪಂಚಾಯತಿ ಕಟ್ಟಡದ ಸಮೀಪವಿದ್ದ ಹಳೇ ಕಟ್ಟಡವನ್ನು ತೆರವುಗೊಳಿಸಿ ನೆಲ ಅಂತಸ್ತಿನಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಾಣಕ್ಕೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ಅವಧಿಯ ನಂತರ ಈಗಿನ ಅಧ್ಯಕ್ಷರು ಆಡಳಿತ ಮಂಡಳಿ ಮುಂದುವರಿದ ಕಾಮಗಾರಿ ಪೂರ್ಣಗೊಳಿಸಿ ಶಾಸಕರು ಉದ್ಘಾಟನೆ ಮಾಡಿ ತ್ಯಾಜ್ಯ ಮುಕ್ತ ಗ್ರಾಮವನ್ನಾಗಿಸಲು ಪಣತೊಡಬೇಕೆಂದು ಸಲಹೆ ನೀಡಿದ್ದಾರೆ. ಗ್ರಾಮಸ್ಥರು ಪಂಚಾಯಿತಿಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ತಾಪಂ ಇಒ ಪರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನೀತಾ ಮಂಜುನಾಥ್ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರಮೀಳಾ, ಮಾಜಿ ಅಧ್ಯಕ್ಷ ಹಕೀಂ, ಅಭಿವೃದ್ಧಿ ಅಧಿಕಾರಿ ನಂಜುಂಡ ಸ್ವಾಮಿ, ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಗ್ಯಾರಂಟಿ ಸಮತಿ ಸದಸ್ಯರಾದ ಸುಹಾದ, ಪಂಚಾಯಿತಿ ಸದಸ್ಯರಾದ ಸಫಿಯಾ ಮಹಮ್ಮದ್, ಅಪ್ಸಲ್, ಸಿಂಧು, ಕೋಯಾ, ಮುಸ್ತಫ, ಸಂಸೀರ್ ಹಾಜರಿದ್ದರು.