ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆಯ ಉದ್ದೇಶದ ಸಲುವಾಗಿ ಹಸಿರು ನಾಳೆ, ಮಲೆ ಮಹದೇಶ್ವರ ಬೆಟ್ಟ ಎಂಬ ಮಹತ್ತರ ಯೋಜನೆ ಅನುಷ್ಠಾನಕ್ಕಾಗಿ ತ್ರಿಪಕ್ಷೀಯ ಒಡಂಬಂಡಿಕೆಯನ್ನು ಮಾಡಿಕೊಳ್ಳಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್, ಮೈಸೂರು ಕಾವೇರಿ ಪ್ರಾದೇಶಿಕ ಸಂಸ್ಥೆಯ (ಎಂವೈಕೆಎಪಿಎಸ್-ಮೈಕಾಪ್ಸ್) ಉಪಾಧ್ಯಕ್ಷ ತ.ಮ. ವಿಜಯ ಭಾಸ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾರೋತ್ ಅವರ ಸಮ್ಮುಖದಲ್ಲಿ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು, ಮೈಸೂರು ಕಾವೇರಿ ಪ್ರಾದೇಶಿಕ ಸಂಸ್ಥೆಯ (ಎಂವೈಕೆಎಪಿಎಸ್-ಮೈಕಾಪ್ಸ್) ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಪ್ ಉಲ್ ಹಸನ್ ಹಾಗೂ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಕಿರಣ್‌ಕುಮಾರ್ ಅವರು ಯೋಜನೆ ಅನುಷ್ಠಾನದ ಒಪ್ಪಂದಕ್ಕೆ ಸಹಿ ಹಾಕಿದರು.
ಹಸಿರು ನಾಳೆ, ಮಲೆ ಮಹದೇಶ್ವರ ಬೆಟ್ಟ (ಗ್ರೀನ್ ಟುಮಾರೊ, ಎಂಎಂ ಹಿಲ್) ಯೋಜನೆಯು ಮೂರು ವರ್ಷದ್ದಾಗಿದ್ದು, ತ್ಯಾಜ್ಯ ನಿರ್ವಹಣೆಯ ಎಲ್ಲ ವಿಭಾಗಗಳಲ್ಲಿ ಸಮರ್ಪಕವಾಗಿ ಯೋಜನೆ ಅನುಷ್ಠಾನವಾಗಲಿದೆ. ಎಲ್‌ಐಸಿಎಚ್‌ಎಫ್‌ಎಲ್ ಸಂಸ್ಥೆಯು ಯೋಜನೆಗೆ ಅಗತ್ಯವಾದ ಅನುದಾನದ ನೆರವು ನೀಡಲಿದ್ದು, ಮೈಕಾಪ್ಸ್ ಸಂಸ್ಥೆಯು ಯೋಜನೆ ಅನುಷ್ಠಾನದ ನಿರ್ವಹಣೆ ಹೊತ್ತಿದೆ.
ಯೋಜನೆಯು ಮಲೆ ಮಹದೇಶ್ವರ ಬೆಟ್ಟವನ್ನು ಹಸಿರುಮಯವಾಗಿಸುವ ಖಾತರಿಯೊಂದಿಗೆ ಅಗತ್ಯವಿರುವ ಸಮಗ್ರ ತ್ಯಾಜ್ಯ ನಿರ್ವಹಣೆ ಯೋಜನೆ, ತ್ಯಾಜ್ಯ ಸಂಗ್ರಹ ವ್ಯವಸ್ಥೆಯನ್ನ ಸುಸ್ಥಿರಗೊಳಿಸುವ, ತ್ಯಾಜ್ಯ ಸಂಗ್ರಹಣೆಯಿಂದ ಬರುವ ಆದಾಯವನ್ನು ಸ್ಥಳೀಯವಾಗಿ ನೀಡುವುದೂ ಸೇರಿದಂತೆ ಒಟ್ಟಾರೆ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವ ಉದ್ದೇಶ ಹೊಂದಿದೆ. ಒಡಂಬಡಿಕೆ ಸಂದರ್ಭದಲ್ಲಿ ಮೈಕಾಪ್ಸ್ ಸಂಸ್ಥೆಯ ಉಪಾಧ್ಯಕ್ಷ ತ.ಮ. ವಿಜಯ ಭಾಸ್ಕರ್ ಮಾತನಾಡಿ, ಕಾವೇರಿ ಪ್ರಾದೇಶಿಕ ಸಂಸ್ಥೆಯು ಕಾವೇರಿ ನದಿಯ ಜಿಲ್ಲೆಗಳಲ್ಲಿ ಬಹುಮುಖ್ಯ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಂದಾಗಿದೆ. ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಗೆ ಅನುಕೂಲವಾಗುವ ಇನ್ನೂ ಹೆಚ್ಚು ಪ್ರಾಜೆಕ್ಟ್‌ಗಳನ್ನು ತೆಗೆದುಕೊಳ್ಳಲಿದ್ದೇವೆ. ಅಧಿಕ ಕೆಲಸ ಕಾರ್ಯಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಿದ್ದೇವೆ ಎಂದರು.
ಪ್ರಸ್ತುತ ಮಲೆ ಮಹದೇಶ್ವರ ಬೆಟ್ಟದಲ್ಲಿ ಅನುಷ್ಠಾನ ಮಾಡಲಿರುವ ಮಹತ್ವದ ಹಸಿರು ಯೋಜನೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಮನ್ವಯ ಸಹಕಾರದೊಂದಿಗೆ ಯಶಸ್ವಿಯಾಗಿ ಮಾಡೋಣ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಬದ್ದತೆಯಿಂದ ಕಾರ್ಯನಿರ್ವಹಿಸಲಿದೆ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾ ನಾಗ್ ಮಾತನಾಡಿ, ಮಲೆಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳು ಅಲ್ಲದೇ ತಮಿಳುನಾಡಿನಿಂದಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಜಾತ್ರಾ ಸಂದರ್ಭದಲ್ಲಂತೂ ತ್ಯಾಜ್ಯ ನಿರ್ವಹಣೆ ಬಹು ಸವಾಲಿನ ಕಾರ್ಯವಾಗಿದೆ. ಇದೀಗ ಮೈ ಕಾಪ್ಸ್ ಸಂಸ್ಥೆಯು ತ್ಯಾಜ್ಯ ನಿರ್ವಹಣೆ ಯೋಜನೆ ಅನುಷ್ಟಾನಕ್ಕೆ ಮುಂದಾಗಿರುವುದು ಅತ್ಯಂತ ಅಭಿನಂದನೀಯ ಹಾಗೂ ಉಪಯೋಗಿ ಕಾರ್ಯವಾಗಿದೆ ಎಂದರು.
ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರದಲ್ಲಿ ಅತ್ಯಂತ ಯೋಜಿತ ಹಾಗೂ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವುದು ಅಗತ್ಯವಾಗಿತ್ತು. ಈ ನಿಟ್ಟಿನಲ್ಲಿ ಯೋಜನೆ ಕಾರ್ಯಗತಗೊಳಿಸಲು ತ್ರಿಪಕ್ಷೀಯ ಒಪ್ಪಂದವು ಸರಿಯಾದ ಸಮಯಕ್ಕೆ ಆಗಿದೆ. ಜಿಲ್ಲಾಡಳಿತವು ಪ್ರಾಧಿಕಾರ, ಅರಣ್ಯ ಇಲಾಖೆ ಸಹಯೋಗದೊಂದಿಗೆ ಪ್ಲಾಸ್ಟಿಕ್ ಮುಕ್ತ ಮಹದೇಶ್ವರ ಬೆಟ್ಟ ಎಂಬ ಕಾರ್ಯವನ್ನು ರೂಪಿಸಿದ್ದು, ಈ ದಿಸೆಯಲ್ಲಿ ಮುಂದಾಗಿದ್ದೆವು. ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಮೂರು ವರ್ಷಗಳ ನೂತನ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಯೋಜನೆಗೆ ಅಗತ್ಯವಾದ ಎಲ್ಲ ಸಹಕಾರ ನೀಡಲಿದ್ದೇವೆ. ಎಲ್ಲ ಇಲಾಖೆಗಳು ಒಂದಾಗಿ ಕೆಲಸ ಮಾಡಲಿವೆ. ರಚನಾತ್ಮಕವಾಗಿ ಯೋಜನೆ ಫಲಪ್ರದವಾಗಲು ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಲಿದ್ದಾರೆ. ಹಸಿರು ಮಹದೇಶ್ವರ ಬೆಟ್ಟ ಯೋಜನೆ ಸಾಕಾರಕ್ಕಾಗಿ ಪ್ರತಿ ಹಂತದಲ್ಲಿಯೂ ಅತ್ಯಂತ ಗಮನಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ತಿಳಿಸಿದರು.
ಮೈಸೂರು ಕಾವೇರಿ ಪ್ರಾದೇಶಿಕ ಸಂಸ್ಥೆಯ (ಎಂವೈಕೆಎಬಿಎಸ್-ಮೈಕಾಪ್ಸ್) ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಪ್ ಉಲ್ ಹಸನ್ ಅವರು ಮಾತನಾಡಿ, ಈಗಾಗಲೇ ಯೋಜನೆ ಸಂಬಂಧ ಭಾಗೀದಾರರ ಸಭೆ ನಡೆಸಲಾಗಿದೆ. ಸರ್ವೆ ಸಮೀಕ್ಷೆ ಕಾರ್ಯಗಳನ್ನು ಆರಂಭಿಸಲಾಗಿದೆ. ನಮ್ಮ ಸಂಸ್ಥೆಯಿಂದ ಸ್ಥಳೀಯರನ್ನು ಸಿಬ್ಬಂದಿಯಾಗಿ ನಿಯೋಜಿಸಿಕೊಂಡಿದ್ದೇವೆ. ಯೋಜನೆಗಾಗಿ ಅಗತ್ಯವಿರುವ ಸಹಕಾರವನ್ನು ಬಯಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾ ರೋತ್, ಮುಖ್ಯ ಯೋಜನಾಧಿಕಾರಿ ಕಿರಣ್ ಪಡ್ನೇಕರ್, ಮೈಕಾಪ್ಸ್ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಕೆ.ಎಸ್. ವಿಶ್ವ ಕಿರಣ್ ಹಾಗೂ ಇನ್ನಿತರರು ಇದ್ದರು.