ಜಿಲ್ಲೆ

ತ್ಯಾಗರ್ತಿಯಲ್ಲಿ ನೂತನ ಅಡಕೆ ಖರೀದಿ ಕೇಂದ್ರಕ್ಕೆ ಚಾಲನೆ; ಕ್ಯಾಂಪ್ಕೋ ಸಹಕಾರ

ತ್ಯಾಗರ್ತಿ: ಸಹಕಾರ ಸಂಘಗಳು ಅಥವಾ ನೋಂದಾಯಿತ ಸಂಸ್ಥೆಗಳ ಮೂಲಕ ಮಾರಾಟ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ಎಂದು ಕ್ಯಾಂಪ್ಕೋ ನಿರ್ದೇಶಕ ಎಚ್.ಎಂ.ರಾಘವೇಂದ್ರ ರೈತರಿಗೆ ಸಲಹೆ ನೀಡಿದರು.

ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕ್ಯಾಂಪ್ಕೋ ಸಹಯೋಗದಲ್ಲಿ ಸೋಮವಾರ ನೂತನ ಅಡಕೆ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಅಡಕೆ ಬೆಳೆಗಾರರ ಹಿತರಕ್ಷಣೆಗೆ ಕ್ಯಾಂಪ್ಕೋ ಸದಾ ಬೆನ್ನೆಲುಬಾಗಿ ನಿಂತು ಕೆಲಸ ಮಾಡುತ್ತಿದೆ. ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಸಂಸ್ಥೆ ಕೋಕೊ, ಕಾಳುಮೆಣಸು, ರಬ್ಬರ್ ಜತೆಗೆ ಮುಂದಿನ ದಿನಗಳಲ್ಲಿ ಏಲಕ್ಕಿ, ಲವಂಗ ಮುಂತಾದ ಕೃಷಿ ಉತ್ಪನ್ನಗಳ ಖರೀದಿಗೆ ಯೋಜನೆ ರೂಪಿಸಿದೆ ಎಂದರು.

ಕರ್ನಾಟಕ ಹಾಗೂ ಕೇರಳದಲ್ಲಿ ಕಾರ್ಯನಿರ್ವಹಿಸುವ ಕಾಂಪ್ಕೋ ಸಂಸ್ಥೆ ಗುಣಮಟ್ಟದ ಕೊಬ್ಬರಿ ಎಣ್ಣೆ, ಚಾಕೋಲೆಟ್ಸ್ ಮಾರಾಟ ಮಾಡುತ್ತಿದೆ. ರೈತರ ಅನುಕೂಲಕ್ಕಾಗಿ ಸಂಸ್ಥೆಯು ಎಲೆಚುಕ್ಕೆ ರೋಗ, ಹಳದಿ ಎಲೆ ರೋಗ ನಿಯಂತ್ರಣಕ್ಕೆ ಬೇಕಾದ ಔಷಧ ಕಂಡುಕೊಳ್ಳಲು ವಿವಿಧ ಸಂಶೋಧನಾ ಕೇಂದ್ರಗಳ ಜತೆಗೆ ಸಂಪರ್ಕ ಸಾಧಿಸಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಕ್ಯಾಂಪ್ಕೋ ಸದಸ್ಯರ ಆರೋಗ್ಯ ವೆಚ್ಚಗಳಿಗೆ ಆರ್ಥಿಕ ಸಹಕಾರ ನೀಡುತ್ತಿದೆ. ಎಲ್ಲ ಅಡಕೆ ಮಾರಾಟ ಸಹಕಾರ ಸಂಘಗಳ ಜತೆಗೆ ಸಂವಹನ ನಡೆಸಿ ಬೆಳೆಗಾರರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.