ಬೀದರ್: ಸ್ವಾತಂತ್ರ್ಯ ಎನ್ನುವುದು ಕೇವಲ ಪದವಲ್ಲ. ನಮ್ಮ ಪೂರ್ವಜರ ತ್ಯಾಗ, ಬಲಿದಾನದ ಸಂಕೇತ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಬಿ.ಜಿ. ಶೆಟಕಾರ ಹೇಳಿದರು.
ನಗರದ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಜಿಕೆ ಫೌಂಡೇಷನ್ ಹಮ್ಮಿಕೊಂಡಿದ್ದ ರಾಷ್ಟ್ರ ಧ್ವಜ ಉಚಿತ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾವಿರಾರು ಜನರ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಯುವಕರ ಮೇಲಿದೆ. ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಜಿಕೆ ಫೌಂಡೇಷನ್ ಜಿಲ್ಲೆಯಲ್ಲಿ 75 ಸಾವಿರ ರಾಷ್ಟ್ರ ಧ್ವಜ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ನ್ಯಾಸ್ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಅಷ್ಟೂರ್ ಮಾತನಾಡಿ, ಜಗತ್ತಿನಲ್ಲಿ ಅತ್ಯಂತ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರ ಭಾರತ. ಯುವಶಕ್ತಿಯೇ ನಮ್ಮ ದೇಶದ ಶಕ್ತಿ. ಪ್ರತಿಯೊಬ್ಬರೂ ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು ಎಂದು ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಜಿಕೆ ಫೌಂಡೇಷನ್ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್ ಮಾತನಾಡಿ, ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಫೌಂಡೇಷನ್ ವತಿಯಿಂದ ಜಿಲ್ಲಾದ್ಯಂತ 75 ಸಾವಿರ ರಾಷ್ಟ್ರ ಧ್ವಜ ವಿತರಿಸಲಾಗುತ್ತಿದೆ. ಪ್ರತಿ ಹಳ್ಳಿಗೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ. 13ರಿಂದ 15ರವರೆಗೆ ಎಲ್ಲರೂ ತಮ್ಮ ತಮ್ಮ ಮನೆ ಮೇಲೆ ತಿರಂಗಾ ಧ್ವಜ ಹಾರಿಸಬೇಕು ಎಂದು ಹೇಳಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ, ಬಸವ ಕೇಂದ್ರ ಟ್ರಸ್ಟ್ ಅಧ್ಯಕ್ಷ ಪ್ರಭುರಾವ ವಸ್ಮತೆ, ಕರಾಶಿ ಸಂಸ್ಥೆ ಕಾರ್ಯದರ್ಶಿ ಸಿದ್ರಾಮ ಪಾರಾ, ವಿರೂಪಾಕ್ಷ ಗಾದಗಿ, ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ್ ಇತರರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಗುರುನಾಥ ರಾಜಗೀರಾ ನಿರೂಪಣೆ ಮಾಡಿದರು. ವೀರೇಶ ಸ್ವಾಮಿ ವಂದಿಸಿದರು.