ನುಗ್ಗೇಹಳ್ಳಿ: ಹೋಬಳಿಯ ಸಂತೆಶಿವರ ಅಗ್ರಹಾರ ಬೆಳಗುಲಿ ಏತ ನೀರಾವರಿ ಯೋಜನೆ ಸಾಕಾರಗೊಳ್ಳಲು ಸಾಹಿತಿ ಎಸ್.ಎಲ್.ಭೈರಪ್ಪ ಅವರೇ ಕಾರಣ. ಅವರ ಪರಿಶ್ರಮದಿಂದ ಯೋಜನೆಗೆ ಅನುದಾನ ದೊರೆತಿದ್ದು ಶಾಶ್ವತವಾಗಿ ಅವರ ಹೆಸರು ಉಳಿಯಲಿ ಎಂಬ ಕಾರಣಕ್ಕೆ ಈ ಯೋಜನೆಗೆ ಡಾ.ಎಸ್.ಎಲ್.ಭೈರಪ್ಪ ಏತ ನೀರಾವರಿ ಯೋಜನೆ ಎಂಬ ಹೆಸರಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಕಾರೇಹಳ್ಳಿ ಸಮೀಪದ ಜಾಬ್‌ಘಟ್ಟ ಗ್ರಾಮದ ಬಳಿ ಇರುವ ನಾಗಮಂಗಲ ವಿಭಾಗದ ಹೇಮಾವತಿ ನಾಲೆಯ ಜಾಕ್‌ವೆಲ್ನಲ್ಲಿ ಭಾನುವಾರ ನೀರೆತ್ತುವ ಮೋಟಾರ್‌ಗೆ ಚಾಲನೆ ನೀಡಿ ಮಾತನಾಡಿದರು. ಎಸ್.ಎಲ್.ಭೈರಪ್ಪನವರು ತಮ್ಮ ಹುಟ್ಟೂರಾದ ಸಂತೆಶಿವರ ಗ್ರಾಮದ ರೈತರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಗ್ರಾಮದ ಕೆರೆಗೆ ಶಾಶ್ವತವಾಗಿ ನೀರು ತುಂಬಿಸುವ ಉದ್ದೇಶದಿಂದ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 20 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿಸಿದ್ದರು. ಕಳೆದ ವರ್ಷ ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ ಯೋಜನೆಯ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲಾಗಿದೆ. ಈ ಯೋಜನೆ ಸಾಕಾರಗೊಳ್ಳಲು ಶ್ರಮಿಸಿದ ಅವರಿಗೆ ಗೌರವ ಸೂಚಿಸುವ ಸಲುವಾಗಿ ಯೋಜನೆಗೆ ಡಾ.ಎಸ್.ಎಲ್.ಭೈರಪ್ಪ ಯೋಜನೆ ಹೆಸರಿಡಲಾಗಿದೆ ಎಂದರು.
ನುಗ್ಗೇಹಳ್ಳಿ ಹಾಗೂ ಹಿರೀಸಾವೆ ಭಾಗದ ಸುಮಾರು 20ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಈ ಯೋಜನೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಈ ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದರು. ಈಗಾಗಲೇ ಶೇ.90 ಕಾಮಗಾರಿ ಪೂರ್ಣಗೊಂಡಿದ್ದು ಗುತ್ತಿಗೆದಾರರ ಸಮಸ್ಯೆಯಿಂದ ವಿಳಂಬವಾಗಿದೆ. ಈ ಬಗ್ಗೆ ನೀರಾವರಿ ಸಚಿವರ ಗಮನಕ್ಕೂ ತರಲಾಗಿದೆ. ಶೀಘ್ರ 91 ಅವಾರ್ಡ್ ಮಾಡಿ ಬಾಕಿ ಉಳಿದಿರುವ 900 ಮೀಟರ್ ಪೈಪ್‌ಲೈನ್ ಕಾಮಗಾರಿ ಜಾಕ್‌ವೆಲ್‌ನಲ್ಲಿ ವಿದ್ಯುತ್ ಸಂಪರ್ಕ ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಆದರೆ, ಗುತ್ತಿಗೆದಾರರು ನೀರಾವರಿ ಇಲಾಖೆಯಿಂದ ಎನ್‌ಒಸಿ ಕಾಯುತ್ತಿದ್ದಾರೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತದೆ. ರೈತರ ಹಿತ ದೃಷ್ಟಿಯಿಂದ ಯೋಜನೆ ಪೂರ್ಣಗೊಂಡರೆ ಈ ವ್ಯಾಪ್ತಿಯ ಕೆರೆಗಳಿಗೆ ಈ ವರ್ಷದ ಹಂಗಾಮಿನಲ್ಲಿ ನೀರು ಹರಿಸಬಹುದಾಗಿದೆ. ನವಿಲೆ-ಬಾಗೂರು-ಹಿರೀಸಾವೆ- ಆಲಗೊಂಡನಹಳ್ಳಿ ಏತ ನೀರಾವರಿ ಯೋಜನೆಗಳ ಕೆರೆಗಳಿಗೆ ನೀರು ಹರಿಸಲು ಸೋಮವಾರ ನೀರೆತ್ತುವ ಮೋಟಾರ್‌ಗೆ ಚಾಲನೆ ನೀಡಲಾಗುವುದು ಎಂದರು.
ಸಂತೆಶಿವರ, ಅಗ್ರಹಾರ, ಬೆಳಗುಲಿ, ದುಗ್ಗೇನಹಳ್ಳಿ, ಯಾಚನಘಟ್ಟ ಗ್ರಾಮಗಳ ಕೆರೆಗಳಿಗೆ ಈ ಯೋಜನೆಯಿಂದ ನೀರು ತುಂಬುವುದರಿಂದ ಈ ಭಾಗದ ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಯಾಗಿ ರೈತರು ತೆಂಗು, ಅಡಕೆ, ಶುಂಠಿ ಬೆಳೆಯಲು ಅನುಕೂಲವಾಗುತ್ತದೆ ಎಂದರು.
ಕಾರೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎ.ಸತೀಶ್, ತಾಲೂಕು ಟಿಎಪಿಎಂಎಸ್ ನಿರ್ದೇಶಕ ಎಸ್.ಚಿರಂಜೀವಿ, ನಿವೃತ್ತ ರೇಷ್ಮೆ ಅಧಿಕಾರಿ ಕೃಷ್ಣಪ್ರಸಾದ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ.ರೇವಣ್ಣ, ಹುಲಿಕೆರೆ ಸಂಪತ್ ಕುಮಾರ್, ನಟೇಶ್, ಮಾಜಿ ಗ್ರಾಪಂ ಅಧ್ಯಕ್ಷ ಕೆಂಪೇಗೌಡ, ಸಿ.ಜೆ.ಕುಮಾರ್, ಉದ್ಯಮಿ ಭೂವನಹಳ್ಳಿ ಯೋಗೇಶ್, ಮುಖಂಡರಾದ ಎಸ್.ಬಿ.ವೀರೇಶ್, ಕೃಷ್ಣೇಗೌಡ, ಬೆಳಗೀಹಳ್ಳಿ ಪುಟ್ಟಸ್ವಾಮಿ, ಬ್ಯಾಂಕ್ ಚಂದ್ರಣ್ಣ, ಉದ್ಯಮಿ ಚಿಪ್ಪಿನ ಚಂದ್ರು, ದ್ಯಾವಲಾಪುರ ಪ್ರಕಾಶ್, ದೊಡಗನ್ನಿ ಸತೀಶ್ ಹಾಜರಿದ್ದರು.