ಬೀದರ್: ಇಲ್ಲಿನ ಕೊಳಾರ್ ಹತ್ತಿರದ ರೇಷ್ಮೆ ಇಲಾಖೆಗೆ ಸೇರಿದ 49.23 ಎಕರೆ ಜಮೀನನ್ನು ರಾಜ್ಯ ಸರ್ಕಾರ ತೋಟಗಾರಿಕೆ ಕಾಲೇಜಿಗೆ ನೀಡಿದೆ. ಹೀಗಾಗಿ ಮೂಲಸೌಕರ್ಯ ಕೊರತೆ ಕಾರಣದಿಂದ ಬೀದರ್ ತೋಟಗಾರಿಕೆ ಕಾಲೇಜು ಮುಚ್ಚಲಿದೆ ಎಂಬ ಆತಂಕ ದೂರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಹೇಳಿದರು.
2008ರಲ್ಲಿ ನಗರದ 27.20 ಎಕರೆ ಜಮೀನಿನಲ್ಲಿ ತೋಟಗಾರಿಕೆ ಕಾಲೇಜು ಅಸ್ತಿತ್ವಕ್ಕೆ ಬಂದಿತು. ನಿಯಮದ ಪ್ರಕಾರ ಈ ಕಾಲೇಜು ಆರಂಭಿಸಲು 80 ಎಕರೆ ಜಮೀನು ಬೇಕು. 2013ರಲ್ಲಿ ಐಸಿಆರ್ ಸಮಿತಿ ಇಲ್ಲಿಗೆ ಭೇಟಿ ನೀಡಿ, ಮೂಲಸೌಕರ್ಯಗಳು ಹೊಂದದಿದ್ದರೆ ಕಾಲೇಜು ಮುಚ್ಚುವುದಾಗಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಎಚ್ಚರಿಕೆ ನೀಡಿತ್ತು. ಇದೀಗ ಜಾಗ ದೊರಕಿದ ಕಾರಣ ಸಮಸ್ಯೆ ನಿವಾರಣೆಯಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತೋಟಗಾರಿಕೆ ಕಾಲೇಜಿಗೆ ಜಾಗ ಕೊಡುವ ಸಂಬಂಧ ನಾನು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಕ್ಕೆ ಸಕರ್ಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ರೇಷ್ಮೆ ಇಲಾಖೆ ಕಾರ್ಯದರ್ಶಿ ನೇತೃತ್ವದ ಸಮಿತಿ ಸಭೆ ಸೇರಿ ಕ್ವಾಟಸ್೯ ಹಾಗೂ ಜಮೀನು ಪಡೆಯಲು ರೇಷ್ಮೆ ಇಲಾಖೆಗೆ ವಿವಿಯು ಸಂದಾಯ ಮಾಡಬೇಕಾಗಿದ್ದ ಹಣವನ್ನು ಮನ್ನಾ ಸಹ ಮಾಡಿದೆ. ರೇಷ್ಮೆ ಇಲಾಖೆ ಆವರಣದಲ್ಲಿನ ಕ್ವಾಟಸ್೯ ಸಹಿತ 49.23 ಎಕರೆ ಜಾಗ ಪರಭಾರೆಗೆ ಸಮ್ಮತಿಸಿದೆ ಎಂದರು.
ರೇಷ್ಮೆ ಇಲಾಖೆಗೆ ಸೇರಿರುವ ಕೊಳಾರ್ ಹತ್ತಿರದ ಕ್ವಾಟಸ್೯ ಸಹಿತ 40 ಎಕರೆ ಜಮೀನನ್ನು ತೋಟಗಾರಿಕೆ ಕಾಲೇಜಿಗೆ ಪರಭಾರೆ ಮಾಡುವಂತೆ ಹಿಂದಿನ ಡಿಸಿ ಡಾ.ಪಿ.ಸಿ.ಜಾಫರ್ ಅವರು ಸಲ್ಲಿಸಿದ ಪ್ರಸ್ತಾವನೆಗೆ ಆಗಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಇದಕ್ಕೆ ಪ್ರತಿಯಾಗಿ ಜಮೀನಿಗಾಗಿ 2,24,80,000 ರೂ. ರೇಷ್ಮೆ ಇಲಾಖೆಗೆ ಸಂದಾಯ ಮಾಡುವಂತೆ ತೋಟಗಾರಿಕೆ ವಿವಿಗೆ ಸೂಚಿಸಲಾಗಿತ್ತು. ಆದರೆ, ವಿವಿಯು ಹಣ ಪಾವತಿಸದ ಕಾರಣ ಜಮೀನು ಪರಭಾರೆ ನನೆಗುದಿಗೆ ಬಿದ್ದಿತ್ತು. ಈಗ ಹಣ ಪಾವತಿಸದೇ ಜಾಗ ಕೊಟ್ಟಿರುವ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದರು.
ಸರ್ಕಾರದ ಅಸಡ್ಡೆಯಿಂದ ಹಳ್ಳಿಖೇಡ್ ಹತ್ತಿರದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ(ಬಿಎಸ್ಸೆಸ್ಕೆ) ಬಂದ್ ಆಗಿದೆ. ಕೂಡಲೇ ಇದಕ್ಕೆ ಹಣ ಬಿಡುಗಡೆ ಮಾಡಬೇಕು. 50 ಕೋಟಿ ರೂ. ಅನುದಾನ ಒದಗಿಸಿದರೆ ಕಾರ್ಖಾನೆ ಮೊದಲಿನಂತೆ ಆರಂಭಿಸಿ ತೋರಿಸುವೆ ಎಂದು ಅರಳಿ ಪ್ರತಿಪಾದಿಸಿದರು.
ಬೀದರ್ ನಲ್ಲಿ ಕೃಷಿ ಪದವಿ ಕಾಲೇಜು ಮತ್ತು ರೇಷ್ಮೆ ಸಂಶೋಧನಾ ಕೇಂದ್ರ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸಿಎಂ ಭೇಟಿಯಾಗಿ ಮನವಿ ಸಲ್ಲಿಸುವೆ ಎಂದು ಹೇಳಿದರು. ಟೀಮ್ ಯುವಾ ಸಂಘಟನೆ ಮುಖ್ಯಸ್ಥ ವಿನಯ್ ಮಾಳಗೆ ಇದ್ದರು.
ಸಾರ್ವಜನಿಕರ ಹಿತದಿಂದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣ ಈಗಿರುವ ಜಿಲ್ಲಾಧಿಕಾರಿ ಕಚೇರಿ ಸ್ಥಳದಲ್ಲಿಯೇ ನಿರ್ಮಿಸಬೇಕು. ಕೊಳಾರ್ ಹತ್ತಿರದ ರೇಷ್ಮೆ ಇಲಾಖೆಯ 49.23 ಎಕರೆ ಜಾಗ ಈಗ ತೋಟಗಾರಿಕೆ ಇಲಾಖೆಗೆ ಪರಭಾರೆಯಾಗಿದೆ. ಹೀಗಾಗಿ ಜಿಲ್ಲಾಡಳಿತ ಯಾವ ಕಾರಣಕ್ಕೂ ಈ ಸ್ಥಳದಲ್ಲಿ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಬಾರದು. ಈ ಹೆಜ್ಜೆಯಿಟ್ಟರೆ ಹೋರಾಟ ಅನಿವಾರ್ಯ.| ಅರವಿಂದಕುಮಾರ ಅರಳಿ, ವಿಧಾನ ಪರಿಷತ್ ಸದಸ್ಯ