ಬೇಲೂರು : ತೋಟಗಾರಿಕಾ ಇಲಾಖೆಯಿಂದ ಬೇಲೂರು ತಾಲೂಕಿನ ಅರೇಹಳ್ಳಿ ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಜೇನು ಕೃಷಿ ಸಂಬಂಧ ಆ ಭಾಗದ ರೈತರಿಗೆ ಪ್ರಾತ್ಯಾಕ್ಷಿಕೆ ಮೂಲಕ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಸಂಪನ್ಮೂಲ ವ್ಯಕ್ತಿ ಡಾ.ಟಿ.ನಾಗರಾಜ್ ತರಬೇತಿ ನೀಡಿದರು.
ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಸಂಪನ್ಮೂಲ ವ್ಯಕ್ತಿ ಡಾ.ಟಿ.ನಾಗರಾಜ್ ತರಭೇತಿ ನೀಡಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ವಿವಿಧ ತಳಿಗಳ ಜೇನುಗಳಿದ್ದು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಜೇನುಗಳ ಸಂತತಿಯನ್ನು ಉಳಿಸುವ ಮೂಲಕ ಪ್ರಕೃತಿಯ ಅಸಮತೋಲನ ತಪ್ಪಿಸ ಬಹುದಾಗಿದೆ. ಜೇನು ಕೃಷಿಯಿಂದ ತೋಟಗಾರಿಕೆ ಬೆಳೆಗಳಲ್ಲಿ ಶೇಕಡ 25 ರಿಂದ 30ರಷ ಹೆಚ್ಚುವರಿ ಇಳುವರಿ ಪಡೆಯಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತೋಟಗಳಲ್ಲಿ ವಿಪರೀತ ಕೀಟ ನಾಶಕ ಮತ್ತು ಕಳೆನಾಶಕ ಬಳಕೆ ಹೆಚ್ಚಾಗಿರುವುದರಿಂದ ಜೇನು ಸಂತತಿ ಕ್ಷೀಣಿಸುತ್ತಿದೆ. ಆದ್ದರಿಂದ ರೈತರು ಎಚ್ಚರಿಕೆ ವಹಿಸಬೇಕಿದೆ. ಬಿಳಿ ಮತ್ತು ನೀಲಿ ಬಣ್ಣದ ಗುಣಮಟ್ಟದ ಜೇನು ಪೆಟ್ಟಿಗೆಗಳು ಜೇನು ಸಾಕಲು ಸೂಕ್ತವಾಗಿದೆ. ಜೇನು ಕುಟುಂಬವಿರುವ ಪೆಟ್ಟಿಗೆಗಳನ್ನು ಕಡಜ, ಇರುವೆ, ಜೇಡ ಮುಂತಾದ ಕೀಟಗಳಿಂದ ರಕ್ಷಿಸಿ ರಕ್ಷಿಸಬೇಕು. ಮಳೆಗಾಲದಲ್ಲಿ ಜೇನು ಹುಳುಗಳಿಗೆ ಆಹಾರದ ಕೊರತೆ ಉಂಟಾಗಲಿದ್ದು ಅಂತಹ ಸಮಯದಲ್ಲಿ ಕೃತಕವಾಗಿ 1-1 ಅನುಪಾತದಲ್ಲಿ ಸಕ್ಕರೆ ಮತ್ತು ನೀರು ಮಿಶ್ರಣದ ಪಾಕ ಮಾಡಿ ಜೇನು ಹುಳುಗಳಿಗೆ ಆಹಾರವನ್ನಾಗಿ ನೀಡಬೇಕು. ಒಂದು ವ?ರ್ಕ್ಕೆ ಒಂದು ಜೇನು ಪೆಟ್ಟಿಗೆಯಿಂದ 6 ಕೆಜಿ ಜೇನುತುಪ್ಪ ಪಡೆಯಬಹುದಾಗಿದ್ದು, ಇದು ರೈತರಿಗೆ ಉತ್ತಮ ಆದಾಯ ತಂದು ಕೊಡಬಲ್ಲದು ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ರಘು ಮಾತನಾಡಿ, ಜೇನು ಕೃಷಿ ತರಬೇತಿಯ ಔಚಿತ್ಯವನ್ನು ವಿವರಿಸುತ್ತಾ ಇಲಾಖೆಯಲ್ಲಿ ಜೇನು ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು .
ಅರೇಹಳ್ಳಿ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಸಂಜಯ್ ಮಾತನಾಡಿ, ಜೇನು ಸಂಬಂಧಿತ ಉತ್ಪನ್ನಗಳಿಗೆ ಒಳ್ಳೆ ಬೇಡಿಕೆ ಇರುವುದರಿಂದ ಪ್ರಸ್ತುತ ಜೇನು ಕೃಷಿಗೆ ಉತ್ತಮ ಅವಕಾಶವಿದ್ದು ರೈತರು ಹೆಚ್ಚಿನ ಗಮನ ನೀಡಬೇಕು. ಮತ್ತು ರೈತ ಉತ್ಪಾದಕ ಸಂಸ್ಥೆ ಮೂಲಕ ಜೇನು ಕೃಷಿ ಮಾಡುವ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು ಎಂದರು.
ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜು, ತಾಪಂವ ಮಾಜಿ ಸದಸ್ಯ ಸೋಮಯ್ಯ, ಪ್ರಗತಿಪರ ಜೇನು ಕೃಷಿಕ ಮಹಮದ್ ಜಾಹಿದ್, ಸಹಾಯಕ ತೋಟಗಾರಿಕಾ ಅಧಿಕಾರಿ ಮಧುಕುಮಾರ್, ಸಿಬ್ಬಂದಿ ಅರುಣ್‌ಕುಮಾರ್, ಜಯಣ್ಣ, ಬೇಂದ್ರೆರಾಜು ಇದ್ದರು.