ಜಿಲ್ಲೆ

ತೊನ್ನು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ

ಚಿತ್ರದುರ್ಗ: ತೊನ್ನು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತ ಸಾಂಕ್ರಾಮಿಕ ರೋಗವಲ್ಲ. ಪ್ರಸ್ತುತ ದಿನಗಳಲ್ಲಿ ಅತ್ಯುತ್ತಮವಾದ ಚಿಕಿತ್ಸಾ ಸೌಲಭ್ಯಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಚರ್ಮರೋಗ ತಜ್ಞೆ ಡಾ.ನಿಖಿತಾ ಬಣಕಾರ್ ಸಲಹೆ ನೀಡಿದರು.

ಬಸವೇಶ್ವರ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಚರ್ಮರೋಗ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ತೊನ್ನು ದಿನಾಚರಣೆಯಲ್ಲಿ ಮಾತನಾಡಿದರು.

ತೊನ್ನು ಅನುವಂಶೀಯ ಕಾಯಿಲೆಯಲ್ಲ. ಚರ್ಮದಲ್ಲಿ ಮೆಲೆನೊಸೈಟ್ ಜೀವಕೋಶಗಳು ನಾಶವಾದಾಗ ಕಾಣಿಸಿಕೊಳ್ಳುತ್ತದೆ. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ, ರೋಗದಿಂದ ಮುಕ್ತರಾಗುವ ಸಾಧ್ಯತೆ ಇದೆ. ರೋಗವನ್ನು ವಿಶ್ವಾಸದಿಂದ ಎದುರಿಸಿ ಎಂದು ತಿಳಿಸಿದರು.

ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ.ಎಂ.ಯೋಗೇಂದ್ರ ಮಾತನಾಡಿ, ಥೈರಾಯ್ಡ್, ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುವವರಿಗೂ ತೊನ್ನು ಬರುವ ಸಾಧ್ಯತೆ ಇದೆ. ಈ ರೋಗದ ಕುರಿತು ಸಮಾಜದಲ್ಲಿ ಮೂಢನಂಬಿಕೆ ಮುಂದುವರೆದಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.

ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಿಂದ ತೊನ್ನು ಸಮಸ್ಯೆ ಪರಿಹರಿಸಬಹುದು. ನಮ್ಮ ಆಸ್ಪತ್ರೆಯಲ್ಲಿ ಅನೇಕ ರೋಗಿಗಳಿಗೆ ಚರ್ಮದ ಕಸಿಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಮುಜುಗರಕ್ಕೆ ಒಳಗಾಗದೆ, ಲಭ್ಯವಿರುವ ಚಿಕಿತ್ಸೆ ಪಡೆಯಲು ಮುಂದಾಗಿ ಎಂದು ಸಲಹೆ ನೀಡಿದರು.

ಇದೇ ವೇಳೆ ಭಿತ್ತಿ ಚಿತ್ರ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೈದ್ಯಕೀಯ ಕಾಲೇಜಿನ ಡೀನ್ ಡಾ.ಜಿ.ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ರಾಜೇಶ್, ಉಪ ವೈದ್ಯಕೀಯ ಅಧೀಕ್ಷಕ ಡಾ.ನಾಗೇಂದ್ರಗೌಡ ಇತರರಿದ್ದರು.