ಜಿಲ್ಲೆ

ತೊಗರಿ ಹೆಚ್ಚುವರಿ ೪೫೦ ರೂ. ಆದೇಶಿಸಿ

ಕಲಬುರಗಿ: ಮಾರುಕಟ್ಟೆಯಲ್ಲಿ ತೊಗರಿ ಬೆಂಬಲ ಬೆಲೆಗಿಂತಲೂ ಕಡಿಮೆಗೆ ಮಾರಾಟ ಆಗುತ್ತಿದ್ದು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ೭೫೦೦ ರೂ.ಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ ೪೫೦ ರೂ. ನೀಡುವುದಾಗಿ ರಾಜ್ಯ ಕೃಷಿ ಮಾರುಕಟ್ಟೆ ಸಚಿವರು ತಿಳಿಸಿದ್ದು, ಅಧಿಕೃತ ಆದೇಶ ಹೊರಡಿಸಬೇಕು ಎಂದು ಪ್ರದೇಶ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ್ ತಿಳಿಸಿದರು.

ಸರ್ಕಾರ ಹೆಚ್ಚುವರಿ ಹಣದ ಕುರಿತು ಹೇಳಿಕೆ ನೀಡಿದ್ದು, ಆದೇಶ ಪತ್ರ ಜಾರಿ ಆಗದೇ ರೈತರು ಗೊಂದಲದಲ್ಲಿ ಇದ್ದಾರೆ. ಖರೀದಿ ಕೇಂದ್ರಗಳಿಗೆ ನೀಡಬೇಕೋ, ಅಷ್ಟೇ ಹಣ ನೀಡುವ ಅಡತ್‌ಗಳಿಗೆ ನೀಡಬೇಕೋ ಎಂಬ ಪ್ರಶ್ನೆ ರೈತರಲ್ಲಿ ಮೂಡಿದೆ. ಸರ್ಕಾರ ಹೆಚ್ಚುವರಿ ಹಣ ನೀಡಿದ ಬಗ್ಗೆ ಕೂಡಲೇ ಅಧಿಕೃತ ಆದೇಶದ ಕುರಿತು ಸ್ಪಷ್ಟನೆ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಜಿಲ್ಲೆಯಲ್ಲಿ ಬೆಳೆ ಕಾಳು ಅಭಿವೃದ್ಧಿ ಮಂಡಳಿ ಮೂಲಕ ಜಿಐ ಟ್ಯಾಗ್ ತೊಗರಿ ಖರೀದಿಗೆ ಮಂಡಳಿ ನಿರ್ಧರಿಸಿದ್ದು, ಜಿಐ ಟ್ಯಾಗ್ ತೊಗರಿ ಖರೀದಿಗೆ ಕೆಲ ಕೇಂದ್ರಗಳನ್ನು ಗುರುತಿಸಲಾಗಿದೆ. ನೋಂದಾಯಿತ ರೈತರು ಮಾತ್ರ ಇಲ್ಲಿ ಮಾರಾಟಕ್ಕೆ ಅರ್ಹರಿದ್ದಾರೆ. ಆದ್ದರಿಂದ ಜಿಲ್ಲೆಯ ಎಲ್ಲ ರೈತರು ಜಿಐ ಟ್ಯಾಗ್ ತೊಗರಿ ಬೆಳೆಗಾರರೆಂದು ನೋಂದಣಿ ಮಾಡಿಕೊಳ್ಳಬೇಕು. ಆನ್‌ಲೈನ್ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಜಿಐ ಟ್ಯಾಗ್ ತೊಗರಿಗೆ ಪ್ರತ್ಯೇಕ ಹಾಗೂ ಹೆಚ್ಚಿನ ಬೆಂಬಲ ಬೆಲೆ ನಿಗದಿಗೆ ಮನವಿ ಸಲ್ಲಿಸಿದ್ದು, ಸಂಘಟನೆಯ ಕೆಲ ಸದಸ್ಯರು, ರೈತರು ಫೆ.೮ರಂದು ದೆಹಲಿಗೆ ನಿಯೋಗದೊಂದಿಗೆ ತೆರಳಿ ಸಂಸದರು, ಕೇಂದ್ರದ ಕೃಷಿ ಸಚಿವರು, ರಾಜ್ಯದ ಕೇಂದ್ರದಲ್ಲಿರುವ ಸಚಿವರಿಗೆ ಹಾಗೂ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಸಮಿತಿಗೆ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರವೂ ಜಿಐ ಟ್ಯಾಗ್ ತೊಗರಿಗೆ ಶೇ.೨೦ ರಿಂದ ೨೫ ಹೆಚ್ಚಿಸಿ ಪ್ರತ್ಯೇಕ ಹಾಗೂ ಹೆಚ್ಚು ಬೆಂಬಲ ಬೆಲೆ ಘೋಷಿಸಲು ಶಿಫಾರಸು ಕಳಿಸಿದೆ. ಇಂತಹ ಶಿಫಾರಸು ಕಳುಹಿಸಲು ಸಹಕರಿಸಿದ ಎಲ್ಲ ಜನಪ್ರತಿನಿಧಿಗಳಿಗೆ ಧನ್ಯವಾದ ತಿಳಿಸಿದರು.

ಮಲ್ಲಿಕಾರ್ಜುನ ಪಾಟೀಲ್, ಮಲ್ಲಿನಾಥ ಪಾಟೀಲ್ ಕಾಳಗಿ ಇತರರಿದ್ದರು.