ಕಲಬುರಗಿ: ನೆಟೆ ರೋಗ, ತೇವಾಂಶ ಕೊರತೆಯಿಂದ ಹಾಳಾದ ತೊಗರಿ ಬೆಳೆಗೆ ವಿಶೇಷ ಪರಿಹಾರ ನೀಡಲು ಆಗ್ರಹಿಸಿ ನಗರದಲ್ಲಿ ಮಾ.೨೫ರಂದು ಎತ್ತಿನ ಬಂಡಿಯೊAದಿಗೆ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ರೊತ್ತಿ ಬುತ್ತಿ ಬಿಚ್ಚಿ ಊಟ ಮಾಡಿ ಸರ್ಕಾರಕ್ಕೆ ಒತ್ತಡ ಹೇರಲು ರೈತರ ಸಭೆಯಲ್ಲಿ ನಿರ್ಣಯಿಸಲಾಯಿತು.
ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಜಿಲ್ಲಾ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು, ಬೃಹತ್ ಹೋರಾಟವನ್ನು ಪಕ್ಷಾತೀತವಾಗಿ ರೂಪಿಸಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಿ, ಪರಿಹಾರ ಪಡೆಯುವವರೆಗೆ ನಿರಂತರವಾಗಿ ಪ್ರತಿಭಟಿಸಬೇಕು ಎಂಬ ಒಕ್ಕೊರಲದಿಂದ ನಿರ್ಣಯಿಸಲಾಯಿತು.
ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ ಮಾತನಾಡಿ, ರೈತರ ಹೋರಾಟ ಪಕ್ಷಾತೀತ ಸಾಗಬೇಕು. ಪದೇ ಪದೆ ರೈತರು ಸಂಕಷ್ಟಕ್ಕೆ ಈಡಾಗುತ್ತಿದ್ದು, ತೊಗರಿ ವಿಷಯ ಬಂದಾಗ ಸರ್ಕಾರ ನಿರಂತರವಾಗಿ ಮಲತಾಯಿ ಧೋರಣೆ ತೋರುತ್ತಿವೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಶೇ.೩೦ ತೊಗರಿ ಬೆಳೆ ಹಾನಿಗೀಡಾಗಿದೆ. ಆದರೆ ಸರ್ಕಾರ ಮೌನ ವಹಿಸಿದೆ. ಕೂಡಲೇ ಪರಿಹಾರಕ್ಕೆ ಗಟ್ಟಿಯಾಗಿ ಹೋರಾಟ ರೂಪಿಸಬೇಕು ಎಂದರು.
ಎಪಿಎAಸಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ ಮಾತನಾಡಿ, ತೊಗರಿ ಬೆಳೆದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರ ಪರಿಹಾರದ ಬಗ್ಗೆ ಮಾತನಾಡುತ್ತಿಲ್ಲ. ಹಿಂದೆ ನೆಟೆ ರೋಗದಿಂದ ಹಾಳಾದ ತೊಗರಿ ರೈತರಿಗೆ ಪರಿಹಾರ ನೀಡಲಾಗಿತ್ತು. ಕೃಷಿ ಇಲಾಖೆ ವರದಿ ನೀಡಿದೆ, ಹಲವು ಬಾರಿ ಮನವಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಬೃಹತ್ ಹೋರಾಟ ರೂಪಿಸಿ, ಒತ್ತಡ ಹೇರಲಾಗುವುದು ಎಂದರು.
ರೈತ ಮುಖಂಡ ದಯಾನಂದ ಪಾಟೀಲ್ ಮಾತನಾಡಿ, ಕಾಟಾಚಾರಕ್ಕೆ ಹೋರಾಟ ಮಾಡದೇ ರೈತರು ಒಗ್ಗಟ್ಟಾಗಿ ತಮ್ಮ ಶಕ್ತಿ ತೋರಿಸುವ ಅನಿವಾರ್ಯತೆ ಬಂದಿದೆ. ಜಿಲ್ಲೆಯ ಜನಪ್ರತಿನಿಧಿಗಳಿಗೆ ಸ್ಪಷ್ಟ ಸಂದೇಶ ಸಾಗಿಸಬೇಕು. ವಿಶೇಷ ಪ್ಯಾಕೇಜ್ ಘೋಷಿಸಿ, ನೆರವಿಗೆ ಸರ್ಕಾರ ನಿಲ್ಲಬೇಕು ಎಂದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ, ಮುಖಂಡರಾದ ಮಲ್ಲಿನಾಥ ಕುಲಕರ್ಣಿ, ಪ್ರಶಾಂತ ಗೌಡ ಮಾಲಿಪಾಟೀಲ್, ಭಾರತಿಬಾಯಿ ಜೀವಣಗಿ, ಚಂದ್ರಶೇಖರ ಹರಸೂರ, ಮಲ್ಲಿನಾಥ ಮೇಳಕುಂದಾ, ಅಶೋಕ ಮಹಾಗಾಂವ, ರಾಜೇಂದ್ರ ಕರೆಕಲ್, ಎಂ.ಬಿ.ಪಾಟೀಲ್, ಬಸವರಾಜ ಪಾಟೀಲ್, ಗಿರೀಶಗೌಡ ಇನಾಂದಾರ, ಬಸವರಾಜ ಕೆಸರೆಟಗಿ, ಭೀಮಶೆಟ್ಟಿ ಮುಕ್ಕಾ, ಮಲ್ಲಿನಾಥ ಪಾಟೀಲ್ ಯಲಗೋಡ, ವೀರು ಪಾಟೀಲ್ ರಾಯ್ಕೋಡ್, ಶಿವರಾಜ ಸಂಗೋಳಗಿ ಇತರರಿದ್ದರು.