ಕೆ.ಸತೀಶ ಮೈದೊಳಲು ಹೊಳೆಹೊನ್ನೂರು
ನಗರ ಪ್ರದೇಶಗಳಲ್ಲಿ ಉದ್ಯೋಗ ಪಡೆಯುವ ಸಲುವಾಗಿ ಯುವಕರು ಕೃಷಿ ಕ್ಷೇತ್ರವನ್ನು ನಿರ್ಲಕ್ಷಸುತ್ತಿರುವ ಸಂದರ್ಭದಲ್ಲಿ ಗುಡುಮಗಟ್ಟೆಯ ಪದವೀಧರ ಯುವಕ ಕೃಷಿಯಲ್ಲಿ ತೊಡಗಿ ನಿರೀಕ್ಷೆಗೂ ಮೀರಿ ಬಂಪರ್ ಬೆಳೆ ಬೆಳೆದು ಅಕ್ಕಪಕ್ಕದ ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿದ್ದಾರೆ.
ಗುಡುಮಗಟ್ಟೆಯ ಮಂಜುನಾಥ್ ವಿದೇಶಿ ತೈವಾನ್ ಪಿಂಕ್ ಪೇರಲೆ ಬೆಳೆ ಬೆಳೆದು ಲಾಭ ಗಳಿಸಿದ್ದಾರೆ. ಇದರಿಂದ ಸುತ್ತಮುತ್ತಲ ಹಳ್ಳಿಗಳ ಜನರೂ ಕೂಡ ಪೆರಲೆ ಬೆಳೆಯತ್ತ ಆಸಕ್ತಿ ವಹಿಸುವಂತಾಗಿದೆ. ಸೀಬೆ ಸಮೃದ್ಧವಾಗಿ ಬೆಳೆದಿದೆ. ಪೇರಲೆ ಕಾಯಿಯಿಂದ ಕಂಗೊಳಿಸುತ್ತಿರುವ ತೋಟ ನೋಡಗರನ್ನು ಆಕರ್ಷಿಸುತ್ತಿದೆ.
ಹೊಸ ಬೆಳೆ ಬೆಳೆಯಲು ಆಸಕ್ತಿ
ತನ್ನ ತಂದೆಯ ಪಾಲಿಗೆ ಬಂದಿದ್ದ ಎರಡು ಎಕರೆ ಖುಷ್ಕಿ ಜಮೀನಿನಲ್ಲಿ ಮೊದಲು ತರಕಾರಿ ಬೆಳೆಯಲಾರಂಭಿಸಿದ ಮಂಜುನಾಥ್ ವಿದೇಶಿ ಬೆಳೆಯನ್ನು ಬೆಳೆಯಲು ನಿರ್ಧರಿಸಿ ತೈವಾನ್ ಸೀಬೆ ಬೆಳೆಯಲು ಮುಂದಾದರು. ಮೊದಲು ಒಂದೆರಡು ವರ್ಷ ಹೊರ ಜಿಲ್ಲೆಗಳಲ್ಲಿ ವಿದೇಶಿ ಹಣ್ಣು ಬೆಳೆಯುತ್ತಿರುವವರನ್ನು ಭೇಟಿ ಮಾಡಿ ಕೃಷಿಯ ಸಾಧಕ ಬಾಧಕಗಳ ವಿವರ ಪಡೆದರು. ನಂತರ ಬಳ್ಳಾರಿ ಮೂಲದ ಸಸಿ ಮಾರಾಟಗಾರರನ್ನು ಸಂಪರ್ಕಿಸಿ 1,200 ತೈವಾನ್ ಪಿಂಕ್ ಪೇರಲೆ ಗಿಡಗಳನ್ನು ಆಮದು ಮಾಡಿಕೊಂಡು ನಾಟಿ ಮಾಡಿ ಗಿಡಗಳನ್ನು ಬೆಳೆಸಲಾಗಿದೆ. ಗಿಡಗಳು ಒಂದು ವರ್ಷದಲ್ಲೇ ಫಸಲು ನೀಡಲು ಆರಂಭಿಸಿವೆ. ಎರಡು ವರ್ಷದ ಗಿಡಗಳಲ್ಲಿ ಎಲೆಗೊಂದರಂತೆ ಬಿಟ್ಟಿರುವ ಪೇರಲೆ ಕಾಯಿಗಳ ಬಾರಕ್ಕೆ ಗಿಡಗಳು ನೆಲಕ್ಕೆ ಬಾಗುತ್ತಿವೆ. ಕಾಯಿಗಳನ್ನು ಪಕ್ಷಿ ಸೇರಿದಂತೆ ಮಂಗಗಳಿಂದ ಕಾಪಾಡಲು ಕವರಿಂಗ್ ಪದ್ಧತಿ ಅಳವಡಿಸಿದ್ದಾರೆ.
ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ ಬಳಕೆ
ತುಂತುರು ನೀರಾವರಿ ಪದ್ಧತಿ ಜತೆಗೆ ಪ್ರಮುಖವಾಗಿ ಕೊಟ್ಟಿಗೆ ಗೊಬ್ಬರ ನೀಡಲಾಗುತ್ತಿದೆ. ವಿದೇಶಿ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುವುದು ಸಾಧ್ಯವಿಲ್ಲದಿದ್ದರೂ ಆದಷ್ಟು ಕಡಿಮೆ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸುತ್ತಿರುವುದು ಮತ್ತೊಂದು ವಿಶೇಷ. ಕೆಲ ಗಿಡಗಳ ಬೆಳವಣಿಗೆ ಕುಂಠಿತವಾಗಿದ್ದರೂ ಬರಪೂರ ಫಸಲು ನೀಡುತ್ತಿವೆ. ರೋಗಬಾಧೆ ತಡೆಗೆ ಕ್ರಿಮಿನಾಶಕಗಳನ್ನು ಬಳಸುವುದು ಅನಿವಾರ್ಯ ಎನ್ನುತ್ತಾರೆ ಯುವಕ ಮಂಜುನಾಥ್.
ವಿದೇಶಿ ತಳಿ ಹಣ್ಣು ಬೆಳೆದು ವಿಫರಾದವರೆ ಹೆಚ್ಚು
ಸ್ಥಳೀಯವಾಗಿ ವಿದೇಶಿ ತಳಿ ಹಣ್ಣು ಬೆಳೆದು ವಿಲರಾದವರೆ ಹೆಚ್ಚಾಗಿದ್ದಾರೆ. ವಿದೇಶಿ ತಳಿಗಳ ನಿರ್ವಹಣಾ ವೆಚ್ಚ ಆದಾಯಕ್ಕಿಂತ ದುಪ್ಪಟ್ಟಾಗಿರುತ್ತದೆ ಎಂದು ಕೆಲವರು ಬೆಳೆಗಳ ನಿರ್ವಹಣೆಯನ್ನು ಕೈಬಿಟ್ಟಿದ್ದಾರೆ. ಮಂಜುನಾಥ್ ಅವರ ವಿದೇಶಿ ತಳಿ ಕೃಷಿಗೆ ತಂದೆ ರಾಮಯ್ಯ ಹಾಗೂ ಅಣ್ಣ ವಿಜಯ್ ಬೆನ್ನುಲುಬಾಗಿ ನಿಂತಿದ್ದಾರೆ. ಗುಡ್ಡದಂತಿರುವ ಕೆಂಪು ಮಿಶ್ರಿತ ಖುಷ್ಕಿ ಜಮೀನನ್ನು ಸಮತಟ್ಟು ಮಾಡಿಕೊಂಡು ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ 4 ಬಾರಿ ಫಸಲಿಗೆ ಬಂದಿರುವ ಬೆಳೆಯಿಂದಾಗಿ ಉತ್ತಮ ಲಾಭ ದೊರೆತಿದೆ. ಮುಂದಿನ ಕೊಯ್ಲುಗಳಲ್ಲಿ ಅಂದಾಜು 2-3 ಟನ್ ಪೇರಲೆ ಹಣ್ಣು ದೊರೆಯಲಿದೆ ಎಂಬ ನಿರೀಕ್ಷೆ ಇದೆ.
ಸಾಕಷ್ಟು ಬೇಡಿಕೆ
ಮಾರುಕಟ್ಟೆಯಲ್ಲಿ ತೈವಾನ್ ಪಿಂಕ್ ಪೇರಲೆಗೆ ಸಾಕಷ್ಟು ಬೇಡಿಕೆ ಇದೆ. ತೋಟಕ್ಕೆ ಬಂದು ವ್ಯಾಪಾರಿಗಳು ಹಣ್ಣನ್ನು ಖರೀದಿಸುತ್ತಿದ್ದಾರೆ. ಒಂದು ಕೆ.ಜಿ.ಗೆ 50-60 ರೂ.ಯಂತೆ ಹಣ ನೀಡಿ ಖರೀದಿಸುತ್ತಿದ್ದಾರೆ. ಹಣ್ಣಿನ ಅಂಗಡಿಗಳಲ್ಲಿ ಒಂದು ಕೆ.ಜಿ. ತೈವಾನ್ ಪಿಂಕ್ ಪೇರಲೆ 100-120 ರೂ.ಗೆ ಮಾರಾಟವಾಗುತ್ತಿದೆ. ಜಿಲ್ಲೆಯ ಹತ್ತಾರು ವರ್ತಕರು ಹಣ್ಣು ಖರೀದಿಗೆ ಆಸಕ್ತಿ ವಹಿಸಿದ್ದಾರೆ.
ಎಲ್ಲ ಕ್ಷೇತ್ರಗಳಲ್ಲೂ ಸಾಧಕ ಬಾಧಕಗಳಿವೆ. ಕೃಷಿಯ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಚಿಂತಿಸಿ ಪರಿಹಾರ ಕಂಡುಕೊಳ್ಳುವುದರಿಂದ ಯಶಸ್ಸು ನಿಶ್ಚಿತ. ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪಾಲಕರು ಪ್ರೇರೇಪಿಸಬೇಕು. ಸದ್ಯ ಕೆ.ಜಿ. 50 ರೂ.ನಂತೆ ತೋಟಕ್ಕೆ ಬಂದು ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಜಿಲ್ಲೆಯ ಮಾರುಕಟ್ಟೆಯಲ್ಲಿ ಪೇರಲೆಗೆ ಬೇಡಿಕೆ ಹೆಚ್ಚಾಗಿದೆ. ನೀರು ನಿರ್ವಹಣೆ ಹತೋಟಿಯಲ್ಲಿದ್ದರೆ ಎಲ್ಲ ವಾತಾವರಣಗಳಲ್ಲಿ ತೈವಾನ್ ಪೇರಲೆ ಸಮೃದ್ಧವಾಗಿ ಬೆಳೆಯುತ್ತದೆ. ಅಡಕೆ ಗಿಡಗಳ ನಡುವೆ ಪೇರಲೆ, ಮರಸೇಬು, ಜಂಬೂ ನೆರಳೆ ಗಿಡಗಳನ್ನು ಬೆಳೆಯಬಹುದು.
ಮಂಜುನಾಥ್
ಯುವ ರೈತ, ಗುಡುಮಗಟ್ಟೆ