ಜಿಲ್ಲೆ

ತೈಲ ತೆರಿಗೆ ಹೊರೆ ತಗ್ಗಲಿ: ಸರ್ಕಾರದ ಮೇಲೆ ಹೆಚ್ಚಿದ ಒತ್ತಡ, 100 ರೂ. ದಾಟಿದ ಡೀಸೆಲ್

ಬೆಂಗಳೂರು: ಬೆಲೆ ಏರಿಕೆಯಲ್ಲಿ ಹಿಂದಿನ ಎಲ್ಲ ದಾಖಲೆ ಮುರಿದು ಮುನ್ನುಗ್ಗುತ್ತಿರುವ ಪೆಟ್ರೋಲ್, ಡೀಸೆಲ್ ಕರೊನಾದಿಂದ ಚೇತರಿಸಿಕೊಳ್ಳುತ್ತಿರುವ ಜನರ ಬದುಕಿಗೆ ಮತ್ತೊಂದು ರೀತಿಯಲ್ಲಿ ಬರೆ ಎಳೆದಿದೆ. ಹೀಗಾಗಿ ತೈಲದ ಮೇಲಿನ ತೆರಿಗೆ ಕಡಿತ ಮಾಡಬೇಕೆಂಬ ಒತ್ತಡ ಸರ್ಕಾರದ ಮೇಲೆ ಹೆಚ್ಚುತ್ತಿದೆ.

ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಲ್ಕು ಪ್ರಮುಖ ಇಲಾಖೆಗಳ ತೆರಿಗೆ ಸಂಗ್ರಹಣೆ ಪ್ರಗತಿಯನ್ನು ಪರಿಶೀಲಿಸಲಿದ್ದು, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆಗೆ ಹಣಕಾಸು ಇಲಾಖೆ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಸಭೆಯಲ್ಲಿ ತೆರಿಗೆ ಸಂಗ್ರಹದ ವಸ್ತು ಸ್ಥಿತಿ ಪರಿಶೀಲನೆ ಜತೆಗೆ ಇಂಧನದ ಮೇಲಿನ ತೆರಿಗೆ ಕಡಿತದ ವಿಚಾರವೂ ಪ್ರಸ್ತಾಪವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ ಹಣಕಾಸು ವರ್ಷದ ಆಗಸ್ಟ್ ಅಂತ್ಯದವರೆಗೆ ವಿವಿಧ ಸ್ವಂತ ತೆರಿಗೆ ಬಾಬ್ತುಗಳಡಿ ಶೇ.40 ರಿಂದ 50 ಆದಾಯ ಜಮೆಯಾಗಿದೆ. ಒಟ್ಟು 1.11 ಲಕ್ಷ ಕೋಟಿ ರೂ. ವಾರ್ಷಿಕ ಗುರಿಯಲ್ಲಿ 43,409 ಕೋಟಿ ರೂ. ಸಂಗ್ರಹವಾಗಿದ್ದು, ಸುಧಾರಣೆ ಸಂಕೇತವೆಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯದ ಆರ್ಥಿಕ ಪರಿಸ್ಥಿತಿಯು ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ ಅವಲಂಬಿಸಿದೆ. ಉಪ ಚುನಾವಣೆಯ ಬಳಿಕ ಆರ್ಥಿಕತೆ ಸ್ಥಿತಿಗತಿ ಪರಿಶೀಲಿಸುವೆ. ಸುಧಾರಣೆ ಕಂಡು ಬಂದರೆ ತೆರಿಗೆ ಹೊರೆ ಇಳಿಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ