ಜಿಲ್ಲೆ

ತೇಲಿ ಬಂದ ಶವದ ಗುರುತು ಪತ್ತೆ

ಬಾಳೆಹೊನ್ನೂರು: ಹುಯಿಗೆರೆ ಗ್ರಾಪಂ ವ್ಯಾಪ್ತಿಯ ಬಿಕ್ಕರಣೆಯ ಹುಲಿಗೆಹಳ್ಳದಲ್ಲಿ ಕಳೆದ ಶನಿವಾರ ಪ್ರವಾಹದಲ್ಲಿ ತೇಲಿ ಬಂದ ಶವದ ಗುರುತು ಪತ್ತೆಯಾಗಿದ್ದು, ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಮೂಡಿಗೆರೆ ತಾಲೂಕಿನ ಬೆಳಗೋಡು ಬಿ.ಹೊಸಳ್ಳಿಯ ಸೀತು (70) ಎಂದು ಗುರುತಿಸಲಾಗಿದೆ.
ಸ್ಥಳೀಯ ನಿವಾಸಿ ಸುಧನ್ವ ಎಂಬುವವರು ಶನಿವಾರ ಬಿಕ್ಕರಣೆಯ ಹುಲಿಗೆಹಳ್ಳದಲ್ಲಿ ಪ್ರವಾಹದ ವಿಡಿಯೋ ಮಾಡುತ್ತಿದ್ದಾಗ ಮಹಿಳೆಯ ಶವ ತೇಲಿಕೊಂಡು ಹೋಗುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಳೆಹೊನ್ನೂರು ಪೊಲೀಸರು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದ್ದರೂ ಶವ ದೊರಕಿರಲಿಲ್ಲ. ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಶೋಧ ನಡೆಸಿದಾಗ ಹೊಳೆಯ ಬದಿಯ ಮರದ ಕೊಂಬೆಯಲ್ಲಿ ಶವ ಸಿಲುಕಿಕೊಂಡಿದ್ದು ಪತ್ತೆಯಾಗಿದೆ.
ಕೂಡಲೇ ವಿಪತ್ತು ಘಟಕದ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿ ಶವ ಮೇಲೆತ್ತಿದ್ದಾರೆ. ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟಿರಬಹುದು ಎಂದು ಸೀತು ಅವರ ಮಗ ಸಂಜೀವ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.