ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಅಂಗವಾಗಿ ನ.2ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗುವ ಮಹಾ ರಥೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ತೇರು ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ತೇರು ನಿರ್ಮಾಣ ಕಾರ್ಯದ ಹಿನ್ನೆಲೆಯಲ್ಲಿ ಬೆಳಗ್ಗೆ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ 6.20ರಿಂದ 7.20ರೊಳಗೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ದೇಗುಲದ ಮುಂಭಾಗದಲ್ಲಿ ತೇರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಿದಿರಿನ ಬೊಂಬು ಹಾಗೂ ಅಚ್ಚೆಗಳಿಂದ ಕೂಡಿದ 56 ಅಡಿ ಎತ್ತರದ ತೇರು ಕಟ್ಟುವ ಕಾರ್ಯವನ್ನು ಆರಂಭಿಸಿದರು. ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ನ.2 ರಂದು ಬೆಳಗ್ಗೆ 7.50 ರಿಂದ 9 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ ಮಹಾ ರಥೋತ್ಸವ ಜರುಗಲಿದ್ದು, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಶೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಪಾರುಪತ್ತೆದಾರ ಮಹಾಲಿಂಗನಕಟ್ಟೆ ಮಹದೇವಸ್ವಾಮಿ ಹಾಗೂ ಬೇಡಗಂಪ ಅರ್ಚಕರು ಇದ್ದರು.
ಮೈಸೂರು ರಾಜರ ಕೊಡುಗೆ: ಮ.ಬೆಟ್ಟದಲ್ಲಿನ ತೇರನ್ನು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಯಾಗಿ ನೀಡಿದ್ದು, 1935 ರಿಂದ ವಿವಿಧ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಾರಥೋತ್ಸವವನ್ನು ನೆರವೇರಿಸಲಾಗುತ್ತಿದೆ. ಈ ತೇರನ್ನು ಅಂದಿನ ಮೈಸೂರು ಸಂಸ್ಥಾನದ ಮೇಸ್ತ್ರಿ ತಿಮ್ಮಯ್ಯಚಾರ್ ಅವರ ಪುತ್ರ ಅಪ್ಪಾಜಿಚಾರ್ ತಯಾರಿಸಿದ್ದರು. ಶಾಲಿವಾಹನ ಶಕೆ 1828ರ ಯುವನಾಮ ಸಂವತ್ಸರದ ಚೈತ್ರಾ ಮಾಸದ ಶುದ್ಧ ಪಾಂಡ್ಯಮಿಯ ಶುಭ ಗುರುವಾರದಂದು 4-4-1935ರಲ್ಲಿ ಅಂದಿನ ಸಾಲೂರು ಬೃಹನ್ಮಠದ ವೇದಮೂರ್ತಿ ಶಾಂತಲಿಂಗಸ್ವಾಮೀಜಿ ಅವರ ಸಮ್ಮುಖದಲ್ಲಿ ಅರ್ಚಕರಾದ ಪುಟ್ಟಮಾದಯ್ಯ ತಂಬಡಿ, ಮಾದ ತಂಬಡಿಗೆ ಹಸ್ತಾಂತರಿಸಲಾಗಿದ್ದು, ಕೋವಿಡ್ ವರ್ಷಗಳನ್ನು ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ವರ್ಷಗಳಲ್ಲೂ ಜಾತ್ರಾ ವೇಳೆ ತೇರನ್ನು ನಿರ್ಮಿಸಿ ಸಾಲೂರು ಶ್ರೀಗಳ ನೇತೃತ್ವದಲ್ಲಿ ಮಹಾ ರಥೋತ್ಸವವನ್ನು ನೆರವೇರಿಸಲಾಗುತ್ತಿದೆ.