ಜಿಲ್ಲೆ

ತೆವಳುತ್ತಿದೆ ಮಾವು ಸಂಸ್ಕರಣಾ ಘಟಕ ಯೋಜನೆ

ಗಂಗಾಧರ್ ಬೈರಾಪಟ್ಟಣ ರಾಮನಗರ

ಜಿಲ್ಲೆಯ ಮಹಾತ್ವಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮಾವು ಸಂಸ್ಕರಣ ಘಟಕ ನಿರ್ಮಾಣ ಯೋಜನೆ ತೆವಳುತ್ತಾ ಸಾಗಿದ್ದು, ಇದಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕಿದೆ.

ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಬಳಿ ಸಂಸ್ಕರಣಾ ಘಟಕಕ್ಕೆ 15 ಎಕರೆ ಜಾಗವನ್ನು ಗುರ್ತಿಸಿ ಒಂದು ವರ್ಷ ಕಳೆದಿದ್ದು, ಘಟಕ ಸ್ಥಾಪನೆ ಸಂಬಂಧ ಯಾವುದೇ ಚಟುವಟಿಕೆಗಳು ಗೋಚರಿಸದಿರುವುದು ರೈತ ಸಮುದಾಯ ನಿರಾಸೆಗೊಳ್ಳಲು ಕಾರಣವಾಗಿದೆ.

ಪ್ರತಿವರ್ಷ ಬರ, ಮಳೆ, ಬೆಲೆ ಕುಸಿತ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಒಳಗಾಗಿ ನಷ್ಟಕ್ಕೆ ಒಳಗಾಗಿರುವ ಜಿಲ್ಲೆಯ ಮಾವು ಬೆಳೆಗಾರರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಮಾವು ಸಂಸ್ಕರಣ ಘಟಕ ಆರಂಭಿಸಬೇಕು ಎನ್ನುವ ಬೇಡಿಕೆ ಕಳೆದ ಹಲವಾರು ವರ್ಷಗಳಿಂದಲೂ ಇದೆ. ಇದಕ್ಕೆ ಪೂರಕ ಎನ್ನುವಂತೆ ಜಿಲ್ಲೆಯ ಬೈರಾಪಟ್ಟಣ ಬಳಿ ತೋಟಗಾರಿಕೆ ಇಲಾಖೆಗೆ ಸೇರಿದ 15 ಎಕರೆ ಜಮೀನನ್ನು ನೀಡುವ ನಿರ್ಧಾರವನ್ನು ಸರ್ಕಾರ ಮಾಡಿ, ಯೋಜನೆ ಜಾರಿಗೆ ಜವಾಬ್ದಾರಿಯನ್ನು ಮಾವು ಅಭಿವೃದ್ಧಿ ಮಂಡಳಿಗೆ ನೀಡಿದೆ. ಆದರೆ, ವರ್ಷ ಕಳೆದರೂ ಪ್ರಗತಿ ಗೋಚರಿಸಿಲ್ಲ.

ಕೇಂದ್ರದಿಂದ ನೆರವು:  ಬೈರಾಪಟ್ಟಣದಲ್ಲಿ ನಿರ್ಮಾಣವಾಗಲಿರುವ ಮಾವು ಸಂಸ್ಕರಣ ಘಟಕಕ್ಕೆ ಕೇಂದ್ರದ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ(ಆರ್‌ಕೆವಿವೈ) ಯಲ್ಲಿ 10 ಕೋಟಿ ರೂ. ಅನುದಾನ ಕೂಡ ದೊರೆತಿದೆ. ಇದರ ಅಡಿಯಲ್ಲಿಯೇ ಘಟಕ ನಿರ್ಮಾಣಕ್ಕೆ ಚಾಲನೆ ದೊರೆಯಬೇಕಿದೆ. ಇದರ ಹೊರತಾಗಿ ಮಾವು ಮಾತ್ರವಲ್ಲದೆ, ಇತರ ಹಣ್ಣುಗಳ ಸಂಸ್ಕರಣಾ ಘಟಕಗಳು ಸಹ ಇಲ್ಲಿಯೇ ಸ್ಥಾಪನೆ ಆಗುವ ಕಾರಣ, ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ ಸಂಸ್ಕರಣ ಘಟಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಟ್ರಾನ್‌ಸ್ಯಾಕ್ಷನ್ ಅಡ್ವೈಸರ್ ನೇಮಕ ಪ್ರಕ್ರಿಯೆಯಲ್ಲಿದೆ. ಈ ಮೂಲಕ ಯೋಜನೆ ಜಾರಿಗೆ ಅಂತಿಮ ರೂಪ ನೀಡಲು ಮಾವು ಅಭಿವೃದ್ಧಿ ಮಂಡಳಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ವೇಗ ನೀಡಬೇಕಿದೆ :  ಜಿಲ್ಲೆಯ ರೈತರ ಬಹು ವರ್ಷಗಳ ಕನಸು ಜಮೀನು ಮಂಜೂರಾತಿಯ ನಂತರ ನನಸಾಗುವ ಲಕ್ಷಣಗಳು ಗೋಚರಿಸಿವೆ. ಆದರೆ ಇದು ಖಾತ್ರಿ ಆಗಬೇಕಾದರೆ ಆದಷ್ಟು ಬೇಗ ಯೋಜನೆ ಕಾರ್ಯಾರಂಭ ಮಾಡಬೇಕು. ಕಳೆದ ಹಲವಾರು ವರ್ಷಗಳಿಂದಲೂ ರೈತರು ಸಾಕಷ್ಟು ತೊಂದರೆಗೆ ಒಳಗಾಗಿರುವ ಕಾರಣ ಮಾವು ಸೇರಿ ಇತರ ಹಣ್ಣುಗಳ ಸಂಸ್ಕರಣಾ ಘಟಕ ಆರಂಭಗೊಂಡರೆ ರೈತರ ಮೊಗದಲ್ಲಿ ಸಂತಸ ಕಾಣಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕಿದೆ.

ರಾಜ್ಯಕ್ಕೆ ಮೊದಲು:  ರಾಜ್ಯಕ್ಕೆ ಮಾವಿನ ಫಸಲು ರಾಮನಗರ ಜಿಲ್ಲೆಯಿಂದಲೇ ಮಾರುಕಟ್ಟೆಗೆ ಬರುವುದು. ಕೋಲಾರ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಯಾಗಿದ್ದರೆ, ನಂತರದ ಸ್ಥಾನ ರಾಮನಗರದ್ದು. ಇವುಗಳ ಸಮೀಪ ಅಲ್ಲಲ್ಲಿ ಅಲ್ಪ ಪ್ರಮಾಣದ ಸಂಸ್ಕರಣಾ ಘಟಕಗಳು ಇವೆ. ಕೆಲವು ಕಾರ್ಖಾನೆಗಳು ಮಾವು ಋತುವಿನಲ್ಲಿ ಹಣ್ಣನ್ನು ಪಲ್ಪ್ ಆಗಿ ಪರಿವರ್ತಿಸಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಅದನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಎಲ್ಲಿಯೂ ಬೃಹತ್ ಸಂಸ್ಕರಣಾ ಘಟಕಗಳು ಇಲ್ಲ. ನೆರೆಯ ಆಂದ್ರಪ್ರದೇಶದ ಚಿತ್ತೂರಿನಲ್ಲಿ ಬೃಹತ್ ಸಂಸ್ಕರಣಾ ಘಟಕವಿದ್ದು, ಈ ಭಾಗದ ಹಣ್ಣು ಬಹುತೇಕ ಅಲ್ಲಿಗೆ ಸರಬರಾಜಾಗುತ್ತದೆ.

ಸಂಸ್ಕರಣ ಘಟಕ ಏಕೆ ಬೇಕು?: ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ವಾರ್ಷಿಕ ಸುಮಾರು 2.5 ಲಕ್ಷ ಟನ್‌ಗಳಷ್ಟು ಇಳುವರಿ ಇದ್ದು, ಸುಮಾರು 400 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಒಟ್ಟು ಉತ್ಪನ್ನದಲ್ಲಿ ಸುಮಾರು 50 ಸಾವಿರ ಟನ್‌ನಷ್ಟು ಹಣ್ಣು ಸಂಸ್ಕರಣೆಗೆ ಸಿಗಲಿದೆ. ಮಾವಿನ ಕಾಲದಲ್ಲಿ ಮಾವು ಸಂಸ್ಕರಣೆ ಮಾಡಿ, ಉಳಿದ ಅವಧಿಯಲ್ಲಿ ಬಾಳೆ, ಸಪೋಟಾ, ಪಪ್ಪಾಯ, ನೀಲಿ ದ್ರಾಕ್ಷಿ ಸಂಸ್ಕರಣೆ ಹಾಗೂ ಎಳೆನೀರಿನ ಟೆಟ್ರಾ ಪ್ಯಾಕ್‌ಗಳನ್ನು ಮಾಡಲು ಈ ಘಟಕವನ್ನು ಬಳಸಿಕೊಳ್ಳಬಹುದಾಗಿದೆ.

ಜಿಲ್ಲೆಗೆ ಮಾವು ಸಂಸ್ಕರಣಾ ಘಟಕದ ಅಗತ್ಯವನ್ನು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದೆವು. ಇದೀಗ ಸರ್ಕಾರ ಜಾಗ ನೀಡಿದ್ದರೂ, ಕಾಮಗಾರಿ ಆರಂಭಿಸದೇ ಇರುವುದು ಬೇಸರ ತರಿಸಿದೆ. ಸರ್ಕಾರ ಕೂಡಲೇ ಘಟಕ ಆರಂಭಕ್ಕೆ ಚಾಲನೆ ನೀಡಬೇಕು. ಸಿದ್ದರಾಜು, ಮಾಜಿ ಅಧ್ಯಕ್ಷ, ಮಾವು ಬೆಳಗಾರರ ಸಂಘ ರಾಮನಗರ
******** ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ವೇಗ ನೀಡಬೇಕು. ಇಲ್ಲವಾದರೆ ವರ್ಷದಿಂದ ವರ್ಷಕ್ಕೆ ಯೋಜನಾ ವೆಚ್ಚ ಹೆಚ್ಚುತ್ತಲೇ ಹೋಗುತ್ತದೆ. ರೈತರು ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಆಸಕ್ತಿ ವಹಿಸಬೇಕು. ಸಿ. ಪುಟ್ಟಸ್ವಾಮಿ, ರೈತ ಸಂಘ ಮುಖಂಡ