ಚಿತ್ರದುರ್ಗ: ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ‘ತೆರೆದ ಮನೆ’ಕಾರ್ಯಕ್ರಮ ನಿರಂತರ ನಡೆಯ ಬೇಕೆಂದು ರಾಜ್ಯಮಕ್ಕಳ ಹಕ್ಕುಗಳ ರಕ್ಷಣಾ ಆ ಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ರಾಜ್ಯಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾಡಳಿತ,ಜಿಪಂ,ಪೋಲಿಸ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಜಿಲ್ಲೆಯ ಎಸ್‌ಜೆಪಿಯು ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಕಾಯ್ದೆಗಳು ಹಾಗೂ ಅಧಿಕಾರಿಗಳ ಪಾತ್ರ ಮತ್ತು ಕರ್ತವ್ಯಗಳ ಕುರಿತಂತೆ ಜಿಪಂದಲ್ಲಿ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ಠಾಣೆಗೆ ಕರೆದುಕೊಂಡು ಬಂದು,ಪೊಲೀಸ್ ವ್ಯವಸ್ಥೆ ಬಗ್ಗೆ ಸಂಪೂರ್ಣ ಪರಿಚಯಿಸಬೇಕು. ತೆರೆದಮನೆ ಕಾರ್ಯಕ್ರಮ ನಿರಂತರ ನಡೆಸುವುದರಿಂದ ಮಕ್ಕಳಲ್ಲಿ ಪೊಲೀಸರೆಡೆ ವಿಶ್ವಾಸ ವೃದ್ಧಿಯಾಗಲಿದೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿವೆ, ಈನಿಟ್ಟಿನಲ್ಲಿ ಎಸ್‌ಜೆಪಿ ಘಟಕದ ಅಧಿಕಾರಿಗಳು ಕಾರ‌್ಯಪ್ರವೃತ್ತರಾಗಬೇಕು. ಮಕ್ಕಳ ಸಹಾಯವಾಣಿ,ಪೋಕ್ಸೊ,ಬಾಲ್ಯ ವಿವಾಹ ನಿಷೇಧ,ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಗಳ ಕುರಿತಂತೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕೆಂದರು.
ಮಕ್ಕಳಸ್ನೇಹಿ ವಾತಾವರಣ ನಿರ್ಮಿಸಿರುವ ಹೊಳಲ್ಕೆರೆ ತಾಲೂಕು ಚಿತ್ರಹಳ್ಳಿಗೇಟ್ ಪೊಲೀಸ್ ಠಾಣೆ ಕಾರ್ಯವೈಖರಿಗೆ ತಿಪ್ಪೇಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಠಾಣೆಗೆ ಈಚೆಗೆ ತಾವು ಭೇಟಿ ನೀಡಿದ್ದ ಸಂದರ್ಭದಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ಪ್ರತ್ಯೇಕ ಕೊಠಡಿ, ಮೂಲಸೌಲಭ್ಯಗಳ ಕಲ್ಪಿಸಿರುವುದು.
ದಾಖಲೆಗಳ ಉತ್ತಮ ನಿರ್ವಹಣೆ, ಬಾಲನ್ಯಾಯ ಮಂಡಳಿ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಾಲ ಮಂದಿರ ಸೇರಿದಂತೆ ಮಕ್ಕಳ ರಕ್ಷ ಣೆಗೆ ಸಂಬಂಧಿಸಿದ ಮಾಹಿತಿ ಪ್ರದರ್ಶನ. ಮಕ್ಕಳ ಪ್ರಕರಣಗಳ ನಿರ್ವಹಣೆಗೆ ಪ್ರತ್ಯೇಕ ದಾಖಲಾತಿ ವಹಿ ನಿರ್ವಹಿಸಲಾಗಿದ್ದು, ಇದೊಂದು ಉತ್ತಮ ನಡೆಯಾಗಿದೆ ಎಂದರು.
ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ,ಜಿಲ್ಲೆಯಲ್ಲಿ ತೆರೆದ ಮನೆ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ. ಪೋಷಕರು ಚಿಕ್ಕಂದಿನಿಂದಲೇ ತಮ್ಮ ಮಕ್ಕಳಿಗೆ ಪೊಲೀಸರ ಬಗ್ಗೆ ಭಯ ಮೂಡಿಸುತ್ತಾರೆ. ಪೊಲೀಸ್ ಅಧಿಕಾರಿ,ಸಿಬ್ಬಂದಿ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಬೇಕು. ಪೊಲೀಸರು ನಮ್ಮ ಸಹಾಯಕ್ಕೆ ಇದ್ದಾರೆ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸಬೇಕೆಂದರು.
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಪ್ರಾದೇಶಿಕ ಸಂಯೋಜಕ ಡಾ.ಕೆ.ರಾಘವೇಂದ್ರಭಟ್ ಹಾಗೂ ಪೊಲೀಸ್ ಮಹಾನಿರ್ದೇಶಕರ ತರಬೇತಿ ಕಚೇರಿ ತರಬೇತುದಾರ ಸಿ.ಬಿ.ರೋಹಿತ್ ಉಪನ್ಯಾಸ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್,ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ,ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಜಿ.ಟಿ.ಬಸವರಾಜ್,ಬಾಲನ್ಯಾಯ ಮಂಡಳಿ ಸದಸ್ಯೆ ಸುಮನಾ ಎಸ್.ಅಂಗಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್.ಪವಿತ್ರಾ ಮತ್ತಿತರರು ಇದ್ದರು.