ಜಿಲ್ಲೆ

ತೆರಿಗೆ ವಿನಾಯಿತಿಗೆ ಪ್ರಯತ್ನ

ಹುಬ್ಬಳ್ಳಿ: ನಾನು ಮುಖ್ಯಮಂತ್ರಿ ಇದ್ದಾಗ 5 ವರ್ಷಗಳ ಕಾಲ ಸಾರಿಗೆ ಬಸ್​ಗಳಿಗೆ ತೆರಿಗೆ ವಿನಾಯಿತಿ ಘೊಷಿಸಿದ್ದೆ. ಅದರಿಂದ ವಾಕರಸಾ ಸಂಸ್ಥೆಗೆ ಪ್ರತಿ ವರ್ಷ 80ರಿಂದ 90 ಕೋಟಿ ರೂ. ಉಳಿತಾಯವಾಗುತ್ತಿತ್ತು. ಅದೇ ಮಾದರಿಯಲ್ಲಿ ಮತ್ತೆ 5 ವರ್ಷ ವಾಹನಗಳ ತೆರಿಗೆ ವಿನಾಯ್ತಿ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸುತ್ತೇನೆ ಎಂದು ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಇಲ್ಲಿನ ಗೋಕುಲ ರಸ್ತೆಯ ವಾಕರಸಾ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 23ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬಸ್ ಪಾಸ್​ನ 722 ಕೋಟಿ ರೂ. ಬಾಕಿ ಹಣವನ್ನು ಸಂಸ್ಥೆಗೆ ಭರಿಸುವಂತೆ ಸಿಎಂ ಅವರ ಗಮನಕ್ಕೆ ತರುತ್ತೇನೆ ಎಂದರು.

ಸಂಸ್ಥೆಯ ಅಧ್ಯಕ್ಷ ವಿ.ಎಸ್ ಪಾಟೀಲ ಮಾತನಾಡಿ, ಸರ್ಕಾರ ನೀಡರುವ ರಿಯಾಯಿತಿ ಪಾಸ್​ಗಳ 722 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಆ ಹಣವನ್ನು ಆದಷ್ಟು ಬೇಗ ಸಂಸ್ಥೆಗೆ ನೀಡಬೇಕು. ಡೀಸೆಲ್ ಮೇಲಿನ ಶೇ.1ರಷ್ಟು ತೆರಿಗೆಯನ್ನು ಬಂದ್ ಮಾಡಬೇಕು. ಟೋಲ್ ನಾಕಾದಲ್ಲಿ ಸಾರಿಗೆ ಬಸ್​ಗಳಿಗೆ ರಿಯಾಯ್ತಿ ಕೊಡಬೇಕು. ಸಂಸ್ಥೆಯ ಸಿಬ್ಬಂದಿಗೆ ಉತ್ತಮ ಸೌಲಭ್ಯ ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಲಾಯಿತು. ಅಂತರ ವಿಭಾಗೀಯ ಕ್ರೀಡಾ ಮತ್ತು ಕಲಾ ಸ್ಪರ್ಧೆಯಲ್ಲಿ ವಿಜೇತರಾದ ಅಧಿಕಾರಿ, ಸಿಬ್ಬಂದಿಗೆ ಬಹುಮಾನ ವಿತರಿಸಲಾಯಿತು. ವಾಕರಸಾ ಸಂಸ್ಥೆಯ ಮೊದಲ ವ್ಯವಸ್ಥಾಪಕ ನಿರ್ದೇಶಕ ಎ.ಎಂ. ನದಾಫ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸಿಬ್ಬಂದಿಯಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.

ವಾಕರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಪಿ.ವೈ. ನಾಯಕ, ಸುನೀಲ ಪತ್ರಿ, ಎನ್.ಜಿ. ನಾಯ್ಕರ, ವಿಜಯಶ್ರೀ ನರಗುಂದ, ವಿ.ಎಚ್. ಸಂತೋಷಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

ಶಾಸಕ, ಮಂತ್ರಿಗಾಗಿ ಬಸ್ ಬಿಡಬೇಡಿ: ಯಾರೋ ಒಬ್ಬ ಶಾಸಕ ಅಥವಾ ಮಂತ್ರಿ ಹೇಳಿದ ಮಾತ್ರಕ್ಕೆ ಹೊಸ ಮಾರ್ಗಕ್ಕೆ ಅನಗತ್ಯ ಬಸ್ ಬಿಡಬಾರದು. ಅಗತ್ಯ ಪ್ರಯಾಣಿಕರು ಇದ್ದಲ್ಲಿ ಮಾತ್ರ ಬಸ್ ಆರಂಭಿಸಬೇಕು. ಯಾರದ್ದೋ ಒತ್ತಡಕ್ಕೆ ಬಸ್ ಆರಂಭಿಸಿ ನಂತರ ಅದರಲ್ಲಿ ನಾಲ್ಕೈದು ಪ್ರಯಾಣಿಕರು ಮಾತ್ರ ಸಂಚರಿಸಿದರೆ ಸಂಸ್ಥೆಗೇ ನಷ್ಟವಾಗುತ್ತದೆ. ಹಾಗಾಗಿ, ಆ ಕುರಿತು ಸಂಸ್ಥೆಯ ಅಧ್ಯಕ್ಷರು, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಬೇಕು ಎಂದು ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ಹೊಸೂರು ಟರ್ವಿುನಲ್ ಕಾರ್ಯಾರಂಭ: ಫೆ.2ರಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಉದ್ಘಾಟನೆಗೊಂಡಿದ್ದ ಹೊಸೂರು ಪ್ರಾದೇಶಿಕ ಸಾರಿಗೆ ಬಸ್ ನಿಲ್ದಾಣದ ಕಾರ್ಯಾರಂಭಕ್ಕೆ ಜಗದೀಶ ಶೆಟ್ಟರ್ ಭಾನುವಾರ ಚಾಲನೆ ನೀಡಿದರು. ಇಂದಿನಿಂದ ವಿಜಯಪುರ, ಬಾಗಲಕೋಟೆ, ಗದಗ, ರಾಯಚೂರು ಮಾರ್ಗದ 309 ಬಸ್​ಗಳು ಹೊಸೂರು ನಿಲ್ದಾಣದಿಂದಲೇ ಹೊರಡಲಿವೆ. ಇದರಿಂದ ಹಳೇ ಮತ್ತು ಗೋಕುಲ ರೋಡ್ ಬಸ್ ನಿಲ್ದಾಣದ ಮೇಲಿನ ಒತ್ತಡ ತಗ್ಗಿಸಲು ಸಹಕಾರಿಯಾಗುತ್ತದೆ. ಸಾರ್ವಜನಿಕರೂ ಸಹಕರಿಸಬೇಕು ಎಂದು ಶೆಟ್ಟರ್ ಮನವಿ ಮಾಡಿದರು.

ಅವಧಿ ಮೀರಿದ ನೀರು ಪೂರೈಕೆ !: ಸಮಾರಂಭದಲ್ಲಿ ಅವಧಿ ಮೀರಿದ ಕುಡಿಯುವ ನೀರಿನ ಬಾಟಲಿಗಳನ್ನು ಪೂರೈಸುವ ಮೂಲಕ ಆಯೋಜಕರು ಭಾರಿ ಟೀಕೆಗೆ ಗುರಿಯಾದರು. 2019ರ ಜುಲೈ 25ರಂದು ಬಾಟಲ್ ತಯಾರಿಸಲಾಗಿದೆ. ತಯಾರಾದ 6 ತಿಂಗಳವರೆಗೆ ಮಾತ್ರ ಬಳಸಬಹುದು ಎಂದು ನಮೂದಾಗಿದೆ. ಈ ಕುರಿತು ಗಮನಕ್ಕೆ ಬಂದರೂ ಸಾರಿಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಸಚಿವ ಜಗದೀಶ ಶೆಟ್ಟರ್ ಹಾಗೂ ಇತರ ಅತಿಥಿಗಳಿಗೂ ಸಾರಿಗೆ ಅಧಿಕಾರಿಗಳು ಅವಧಿ ಮೀರಿದ ನೀರು ಕುಡಿಸಿದರು.!