ಜಿಲ್ಲೆ

ತೆರಿಗೆ ವಸೂಲಿಗೆ ಬಿಗಿ ಕ್ರಮ ಅನುಸರಿಸಿ

ಅರಕಲಗೂಡು: ತೆರಿಗೆ ವಸೂಲಿಗೆ ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಸೂಚಿಸಿದರು.


ಪಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಪಂ ಗೆ ಬರಬೇಕಾದ ಹಣದ ಕ್ರೋಡೀಕರಣ ಕಾರ್ಯ ವ್ಯವಸ್ಥಿತವಾಗಿ ನಡೆಯದ ಕಾರಣ ಹಣದ ಕೊರತೆ ಎದುರಿಸುವಂತಾಗಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.


ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ಅನಿಕೇತನ್ ಮತ್ತು ಅಬ್ದುಲ್ ಬಾಸಿದ್, ಕೆಲವರು ಬಹಳಷ್ಟು ದಿನಗಳಿಂದ ತೆರಿಗೆ ಪಾವತಿಸದೆ ಲಕ್ಷಾಂತರ ರೂ. ಬಾಕಿ ಇರಿಸಿಕೊಂಡಿದ್ದಾರೆ. ವಾಣಿಜ್ಯ ಮಳಿಗೆ ಹಾಗೂ ಇತರ ಬಾಬ್ತುಗಳಿಂದ ಬರಬೇಕಾದ ಹಣವನ್ನು ನಿಗದಿತವಾಗಿ ವಸೂಲಿ ಮಾಡಬೇಕು ಎಂದು ಹೇಳಿದರು.


ಸರ್ಕಾರದಿಂದ ಬರುವ ಅನುದಾನದ ಹಣದಿಂದ ಎಲ್ಲ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೈಗೊಳ್ಳಬೇಕು. ಹೈಮಾಸ್ಟ್ ದೀಪ ಅಳವಡಿಕೆ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಹೀಗಾಗಿ ಇದನ್ನು ಸರಿಪಡಿಸಬೇಕು. ಬಾಕಿ ಉಳಿದಿರುವ ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾರ್ಯವನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಕ್ರಿಯಾ ಯೋಜನೆ ರೂಪಿಸಿರುವ ಕಾಮಗಾರಿಗಳನ್ನು ನಿರ್ವಹಣೆ ಮಾಡದಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.


ಪಟ್ಟಣದಲ್ಲಿ ದಸರಾ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತಿದ್ದು, ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಪಪಂ ನಡೆಸುವ ಹಣಕಾಸಿನ ವ್ಯವಹಾರವನ್ನು ಸ್ಥಾಯಿ ಸಮಿತಿ ಅಧ್ಯಕ್ಷರ ಗಮನಕ್ಕೂ ತರುವಂತೆ ಸಭೆ ಸೂಚಿಸಿತು.


15ನೇ ಹಣಕಾಸು ಯೋಜನೆಯಡಿ ಪಪಂಗೆ 77 ಲಕ್ಷ ರೂ. ಬಿಡುಗಡೆಯಾಗಿದೆ. ಇದಕ್ಕೆ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಸಹ ಪೂರ್ಣವಾಗಿದೆ. ಶೀಘ್ರದಲ್ಲೇ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಎಸ್.ಆರ್.ಸವಿತಾ ವಿವರಿಸಿದರು. ಸದಸ್ಯರಾದ ಗೀತಾ, ಪಲ್ಲವಿ ಇದ್ದರು.