ಜಿಲ್ಲೆ

ತೆರಿಗೆ ಬಾಕಿ ತನಿಖೆಗೆ ಉಪ ಲೋಕಾಯುಕ್ತರ ಆದೇಶ

ಮೈಸೂರು: ಲೆಕ್ಕಪರಿಶೋಧಕರ ವರದಿಯಂತೆ ತೆರಿಗೆ ಸಂಗ್ರಹಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಅವರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಮಾಡಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಲೆಕ್ಕ ಪರಿಶೋಧಕರ ವರದಿಯಂತೆ ತೆರಿಗೆ ಸಂಗ್ರಹಿಸದೆ ಬಾಕಿ ಉಳಿಸಿಕೊಂಡಿದ್ದರೂ ವಸೂಲಿಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಚಿತ್ರದುರ್ಗ ಮೂಲದ ಪಂಚೆ ಶಿವರುದ್ರಪ್ಪ ಅವರು ಒಬ್ಬರೇ ಒಟ್ಟು 156 ಪ್ರಕರಣ ದಾಖಲಿಸಿದ್ದರು. ಅವುಗಳಲ್ಲಿ 84 ಪ್ರಕರಣಗಳನ್ನು ಕೈಗೆತ್ತಿಕೊಂಡು 15 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ ಉಪ ಲೋಕಾಯುಕ್ತರು, ಉಳಿದ ಪ್ರಕರಣಗಳ ತನಿಖೆ ನಡೆಸಿ ಬಾಕಿ ಇರುವ ಪ್ರಕರಣಗಳ ಕುರಿತು ವರದಿ ನೀಡುವಂತೆ ಸೂಚಿಸಿದರು.
ನಂಜನಗೂಡು ತಾಲೂಕಿನಲ್ಲಿ ಹೆಚ್ಚು ತೆರಿಗೆ ಬಾಕಿ ಇದ್ದು, ಒಟ್ಟು 175.32 ಕೋಟಿ ರೂ. ತೆರಿಗೆ ಬರಬೇಕಿದೆ ಎಂದು ಲೆಕ್ಕಪರಿಶೋಧಕರು ವರದಿ ನೀಡಿದ್ದಾರೆ. ಬಾಕಿ ವಸೂಲಿ ಬಗ್ಗೆ ಕೇಳಿದರೆ ತಾತ್ಸಾರದ ಉತ್ತರ ನೀಡಲಾಗುತ್ತಿದೆ. ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಹೇಳಿದರೆ ಆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಸಿಇಒ ಅವರನ್ನು ಭೇಟಿ ಮಾಡಲು ಕಚೇರಿಗೆ ಹೋದರೆ ಸಿಗುವುದಿಲ್ಲ. ಉಪ ಕಾರ್ಯದರ್ಶಿಗಳು ದೂರು ಸ್ವೀಕರಿಸಿ ಕ್ರಮದ ಮಾತನಾಡುತ್ತಾರೆಯೇ ಹೊರತು ಬಾಕಿ ಸಂಗ್ರಹಿಸಿಲ್ಲ ಎಂದು ಪಂಚೆ ಶಿವರುದ್ರಪ್ಪ ವಿವರಿಸಿದರು.
ಇದಕ್ಕೆ ಉತ್ತರಿಸಿದ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ, ಇನ್ನೆರಡು ತಿಂಗಳಲ್ಲಿ ಉಳಿದ ಮೊತ್ತವನ್ನು ಸಂಗ್ರಹಿಸಿದ ಬಗ್ಗೆ ಮಾಹಿತಿ ಕೊಡಬೇಕು. ಸಂಪೂರ್ಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ತಿಂಗಳಲ್ಲಿ ಎರಡು ಸಭೆ ನಡೆಸಿ ತೆರಿಗೆ ವಸೂಲಿ ಮಾಡಿರುವ ಬಗ್ಗೆ ವರದಿ ಕೊಡುವುದು. ಲೆಕ್ಕ ಪರಿಶೋಧಕರ ವರದಿಯಂತೆ ಸಂಗ್ರಹವಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪರಿಶೀಲಿಸಿ ಬಾಕಿ ಹಣ ಸಂಗ್ರಹಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಕೊಡುವಂತೆ ಸಿಇಒಗೆ ಆದೇಶ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೇಳುವ ಮಾಹಿತಿಯನ್ನು ಪಿಡಿಒಗಳು ಕೊಡಬೇಕು. ಲೋಕಾಯುಕ್ತ ವ್ಯಾಪ್ತಿಗೆ ಬರುತ್ತದೆಯೇ, ಇಲ್ಲವೇ ಎಂಬ ಬಗ್ಗೆ ನೋಟಿಸ್ ಜಾರಿಗೊಳಿಸಿದ ಮೇಲೆ ಗೊತ್ತಾಗುತ್ತದೆ. ಮೊದಲು ನೋಟಿಸ್ ಕಳುಹಿಸೋಣ ಎಂದು ಹೇಳುವ ಮೂಲಕ ತಮ್ಮ ಅಧಿಕಾರವನ್ನು ಸೂಕ್ತ ಸಮಯದಲ್ಲಿ ಬಳಸುತ್ತೇವೆ ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು.
ನಕಲು ಮಾಡಿ ಖಾತೆ ಕುರಿತು ತನಿಖೆ:
ನಕಲು ದಾಖಲೆಗಳನ್ನು ಸೃಷ್ಟಿಸಿ ಹೆಚ್ಚಿನ ಭೂಮಿ ಖಾತೆ ಮಾಡಿಕೊಟ್ಟಿರುವ ಪ್ರಕರಣದ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಂದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಯಿತು.
ಕೆ.ಆರ್.ನಗರ ಪಟ್ಟಣದ ಆರ್.ವೇಣುಗೋಪಾಲ್ ಅವರು 1233 ಅಳತೆಯ ನಿವೇಶನದ ಬದಲಿಗೆ 1260 ಸೃಷ್ಟಿಸಿ ಇಬ್ಬರಿಗೆ ಖಾತೆ ಮಾಡಲಾಗಿದೆ. ಈ ಬಗ್ಗೆ ದೂರು ಕೊಟ್ಟಿದ್ದರೂ ಕ್ರಮಕೈಗೊಂಡಿಲ್ಲವೆಂದು ಮುಖ್ಯಾಧಿಕಾರಿ ವಿರುದ್ಧ ದೂರು ಸಲ್ಲಿಸಿದ್ದರು.
ಅಧಿಕಾರಿಗಳು ನೀಡಿದ ಮಾಹಿತಿ ಸಮರ್ಪಕವಾಗಿರಲಿಲ್ಲ. ಯಾವುದೇ ದಾಖಲೆಗಳನ್ನು ಪರಿಶೀಲಿಸಿ ದಾನಪತ್ರದ ಆಧಾರದ ಮೇಲೆ ಹೆಚ್ಚುವರಿ ಭೂಮಿ ನೋಂದಣಿಗೆ ಖಾತೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನಿಖರ ಉತ್ತರ ಇಲ್ಲದಿರುವುದು ಕಂಡುಬಂದಿತು. ಹೀಗಾಗಿ ಖಾತೆ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸುವಂತೆ ದೂರುದಾರರಿಗೆ ಸೂಚಿಸುವ ಜತೆಗೆ, ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ಪಿಡಿಒಗೆ ಶೋಕಾಸ್ ನೋಟಿಸ್:
ವಿಚಾರಣೆಗೆ ಗೈರು ಹಾಜರಾಗಿದ್ದ ತಿ.ನರಸೀಪುರ ತಾಲೂಕಿನ ನಿಲಸೋಗೆ ಪಿಡಿಒಗೆ ಶೋಕಾಸ್ ನೋಟಿಸ್ ನೀಡಲು ಉಪ ಲೋಕಾಯುಕ್ತರು ಸೂಚಿಸಿದರು.
ಪಕ್ಕದ ಮನೆಯವರು ಚರಂಡಿ ನೀರು ಬಿಟ್ಟು ನೈರ್ಮಲ್ಯ ಹಾಳಾಗುತ್ತಿರುವ ಬಗ್ಗೆ ಬಂದಿರುವ ದೂರಿನ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಲಾಗಿತ್ತು. ಆದರೆ ಪಿಡಿಒ ಬಾರದೆ ಕರ್ತವ್ಯಲೋಪವೆಸಗಿದ್ದಾರೆ ಎಂದು ಕುಪಿತಗೊಂಡ ಉಪ ಲೋಕಾಯುಕ್ತರು ನೋಟಿಸ್ ಕಳುಹಿಸುವಂತೆ ಸಿಇಒಗೆ ಸೂಚಿಸಿದರು.
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀಡಿದ್ದ ದೂರಿಗೆ ಹಿಂಬರಹ ಕೊಟ್ಟು ಕಳುಹಿಸದೆ ಪರಸ್ಪರ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಸ್ವತಿಪುರಂ ಠಾಣೆ ಎಎಸ್‌ಐ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದರು.
ನೀಡಿದ ದೂರಿಗೆ ಹಿಂಬರಹ ನೀಡಬೇಕು, ಇಲ್ಲವೇ ಪ್ರಕರಣ ದಾಖಲಿಸಬೇಕು. ರಾಜಿ-ಸಂಧಾನ ಮಾಡಿಕೊಳ್ಳುವಂತೆ ಹೇಳಲು ನೀವು ಯಾರು? ನಿಮ್ಮ ವ್ಯಾಪ್ತಿಗೆ ಬರದ ಪ್ರಕರಣ, ನೀವು ಹಿಂಬರಹ ಕೊಡುವ ಬದಲಿಗೆ ಹೇಳಿಕೆ ಪಡೆದಿದ್ದು ಸರಿಯಲ್ಲ. ಅಧಿಕಾರ ಇಲ್ಲದೆ ಇದ್ದರೂ ಹೇಳಿಕೆ ಪಡೆದಿದ್ದು ಏಕೆ ಎಂದು ಪ್ರಶ್ನಿಸಿದರು.
ದಾಖಲೆಗಳ ಕೊರತೆ ನೆಪದಲ್ಲಿ ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ಅರ್ಜಿಗಳ ಬಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಅರ್ಜಿದಾರರಾದ ಲಕ್ಷ್ಮೀಕೃಷ್ಣ ಅವರು, ವಲಯ ಕಚೇರಿಯಲ್ಲಿ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರೂ ಖಾತೆ ಮಾಡಿರಲಿಲ್ಲ. ಕೆಲವು ದಾಖಲೆಗಳನ್ನು ಒದಗಿಸುವಂತೆ ಹೇಳಿದ ಬಳಿಕ ಕೊಡಲಾಗಿದೆ. ಲೋಕಾಯುಕ್ತಕ್ಕೆ ದೂರು ನೀಡಿದ ಮೇಲೆ ಖಾತೆ ಮಾಡಿಕೊಡಲಾಗಿದೆ. ಆದರೆ ಕೆಲವು ದಾಖಲೆ ಇಲ್ಲವೆಂದು ಹೇಳಿ ವಿಳಂಬ ಮಾಡುವ ಜತೆಗೆ ಮಧ್ಯವರ್ತಿಗಳ ಮೂಲಕ ಹಣಕ್ಕೆ ಬೇಡಿಕೆ ಇಡಲು ಕಾರಣವಾಗಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪ ಲೋಕಾಯುಕ್ತರು, ಹಳೆಯ ಅರ್ಜಿಗಳು ಎಷ್ಟು ಇವೆ, ಇತ್ಯರ್ಥಪಡಿಸದೆ ಉಳಿಸಿರುವ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಬೇಡಿಕೆ ಇಟ್ಟು ಹಣ ವಸೂಲಿಗೆ ದಾರಿ ಮಾಡಿಕೊಟ್ಟಂತಾಗಲಿದೆ. ಕೂಡಲೇ ಒಮ್ಮೆ ಎಲ್ಲ ಬಾಕಿ ಅರ್ಜಿಗಳನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿ.ಪಂ ಸಿಇಒ ಕೆ.ಎಂ.ಗಾಯತ್ರಿ, ಲೋಕಾಯುಕ್ತ ಉಪ ನಿಬಂಧಕ ಚನ್ನಕೇಶವ ರೆಡ್ಡಿ, ಅಪರ ನಿಬಂಧಕ ಬಿ.ಶಿವಕುಮಾರ್, ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಡಿಸಿಪಿ ಎಂ.ಮುತ್ತುರಾಜ್, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್‌ರೆಡ್ಡಿ ಇತರ ಅಧಿಕಾರಿಗಳು ಇದ್ದರು.

ಪೋಡಿ ಕಡತವೇ ನಾಪತ್ತೆ
ಪೋಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತವೇ ನಾಪತ್ತೆಯಾಗಿದ್ದರ ಬಗ್ಗೆ ಸಂಬಂಧಿಸಿದ ತಹಸೀಲ್ದಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ತಿ.ನರಸೀಪುರ ತಾಲೂಕಿನ ಉಕ್ಕಲಗೆರೆಯ ಗೌರಿಶಂಕರ್ ಅವರು ತಮ್ಮ ಜಮೀನಿಗೆ ಅಳತೆ ಮಾಡಿ ಏಕವ್ಯಕ್ತಿ ಪೋಡಿ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಜಮೀನಿನ ಸರ್ವೇ ನಂಬರ್ ದಾಖಲೆಯೇ ಕಳ್ಳತನವೋ ಅಥವಾ ನಾಪತ್ತೆಯಾಗಿದೆಯೇ ಗೊತ್ತಿಲ್ಲ ಎಂದರು.
ಇದಕ್ಕೆ ಕಿಡಿಕಾರಿದ ಫಣೀಂದ್ರ, ಕಳ್ಳತನ ಹೇಗಾಯ್ತು, ನೀವು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೀರಾ ಎಂದು ಪ್ರಶ್ನಿಸಿದರು. ಬಳಿಕ ಡಿಸಿ ಅವರು ಹೊಸದಾಗಿ ಕಡತ ತಯಾರಿಸಿ ಎಡಿಎಲ್‌ಆರ್ ಅವರಿಂದ ವರದಿ ಪಡೆದು ಪೋಡಿ ಮಾಡಿಕೊಡಬೇಕು. ಹೊಸ ಕಡತ ತಯಾರಿಕೆಗೆ ಅನುಮತಿ ನೀಡಿ ಕಳುಹಿಸುತ್ತೇವೆ ಎಂದು ಹೇಳುವ ಮೂಲಕ ಇತ್ಯರ್ಥಪಡಿಸಿದರು.

ಕೆಎಸ್‌ಆರ್‌ಟಿಸಿ ವಿರುದ್ಧ ಸ್ವಯಂ ಪ್ರೇರಿತ ದೂರು
ಶಾಲಾ ಕಾಲೇಜುಗಳಿಗೆ ತೆರಳಲು ನಿಗದಿತ ಸಮಯಕ್ಕೆ ಬಸ್‌ಗಳಿಲ್ಲ ಎಂಬ ವಿದ್ಯಾರ್ಥಿಗಳ ಮನವಿ ಮೇರೆಗೆ ಸ್ವಯಂ ದೂರು ದಾಖಲು ಮಾಡಿಕೊಂಡಿದ್ದ ಉಪಲೋಕಾಯುಕ್ತರು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ಮುಂದೆ ಇಂಥ ದೂರುಗಳು ಬಾರದಂತೆ ನೋಡಿಕೊಳ್ಳಿ, ಇಂಥ ವಿಷಯಗಳಿಗೆ ಲೋಕಾಯುಕ್ತ ಸಂಸ್ಥೆಗೆ ದೂರುಗಳು ಬರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.