ಜಿಲ್ಲೆ

ತೆರಿಗೆ ಪಾವತಿಗೆ ಶೇ.5ರಷ್ಟು ರಿಯಾಯಿತಿ

ಜಿ.ಹೆಚ್. ಧನ್ಯಕುಮಾರ್

ಕಡೂರು: ಪಟ್ಟಣದ ವ್ಯಾಪ್ತಿಯ ಆಸ್ತಿ ಹೊಂದಿರುವ ಮಾಲೀಕರು 2025-26ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ತಿಂಗಳಲ್ಲಿ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ಪಡೆಯ ಬಹುದು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಕಂದಾಯ ತೆರಿಗೆ ಪಾವತಿಸಲು ಆಗಮಿಸಿದ ನಾಗರಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿ ಬಳಿಕ ಮಾತನಾಡಿ, ಈಗಾಗಲೇ ಪಟ್ಟಣದಾದ್ಯಂತ ಆಸ್ತಿ ತೆರಿಗೆ ಪಾವತಿಗಾಗಿ ಪುರಸಭೆಯಿಂದ ಪ್ರಚಾರ ಪಡಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಮೂಲಕ ಅಭಿಯಾನದ ಅಂದೋಲನ ನಡೆಸಲಾಗುತ್ತಿದೆ ಎಂದರು.

ಪಟ್ಟಣದಲ್ಲಿ ನಿವೇಶನ,ವಸತಿ, ವಾಣಿಜ್ಯ ಸೇರಿದಂತೆ ಸರ್ಕಾರದ ಆದೇಶದ ಅನ್ವಯ ಆಸ್ತಿ ತೆರಿಗೆ ಪಾವತಿಸಿ ದಂಡದಿಂದ ಮುಕ್ತರಾಗಬೇಕಿದೆ. ವಿಶೇಷವಾಗಿ ಏಪ್ರಿಲ್ ತಿಂಗಳೊಳಗಾಗಿ ಆಸ್ತಿ ತೆರಿಗೆ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ಪಡೆದು ಪುರಸಭೆ ಅಭಿವೃದ್ದಿಗೆ ಸಹಕರಿಸಬೇಕಿದೆ. ಜನತೆ ರಿಯಾಯಿತಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಮಾತನಾಡಿ, ತೆರಿಗೆ ಪಾವತಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಚೇರಿ ಮುಂಭಾಗದಲ್ಲಿ ವಿಶೇಷ ಕೌಂಟರ್ ವ್ಯವಸ್ಥೆ ಮಾಡಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮೇ, ಜೂನ್ ಹಾಗೂ ಜುಲೈ ತಿಂಗಳವರೆಗೆ ಆಸ್ತಿ ತೆರಿಗೆಗೆ ಯಾವುದೇ ದಂಡ ಇರುವುದಿಲ್ಲ. ಜುಲೈ ನಂತರ ಕಂದಾಯ ಪಾವತಿಗೆ ಮುಂದಾದರೆ ಪ್ರತಿ ತಿಂಗಳು ಶೇ.2ರಷ್ಟು ದಂಡ ವಿಧಿಸಲಾಗುತ್ತದೆ ಎಂದರು.

ಪುರಸಭೆ ಸದಸ್ಯ ಗೋವಿಂದರಾಜು, ಸಿಬ್ಬಂದಿ ತಿಮ್ಮಯ್ಯ, ಶಂಕರ್, ಮುಖಂಡರಾದ ಕೆ.ಆರ್.ಚಂದ್ರು, ಡಿಶ್ ಮಂಜುನಾಥ್, ಶಂಕರ್ ಮತ್ತಿತರಿದ್ದರು.