ಬೇಲೂರು: ತಾಲೂಕಿನ ಗೆಂಡೇಹಳ್ಳಿ ಸಂತೆ ಮೈದಾನದ ಒತ್ತುವರಿ ತೆರವು ಗೊಳಿಸುವಂತೆ ತಹಸೀಲ್ದಾರ್ ಮಮತಾ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಳ್ಳೆರಿ ಗ್ರಾಮ ಪಂಚಾಯಿತಿ ಸದಸ್ಯ ಗೆಂಡೇಹಳ್ಳಿ ಶ್ರೀನಿವಾಸ್ ಆರೋಪಿಸಿದರು.
ಸರ್ವೇ ನಂಬರ್ 6ರ ಆಡುವಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ 3.5 ಎಕರೆ ಜಾಗವು ಗೆಂಡೆಹಳ್ಳಿ ಸಂತೆ ಮೈದಾನಕ್ಕೆ ಸೀಮಿತವಾಗಿದೆ. ಆದರೆ, ಕೆಲವರು ಇಲ್ಲಿನ ಜಾಗವನ್ನು ಒತ್ತುವರಿ ಮಾಡಿದ್ದು, ಸಂತೆ ನಡೆಸಲು ಕಷ್ಟವಾಗುತ್ತಿದೆ. ಮಳೆಗಾಲದಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ತಹಸೀಲ್ದಾರ್ ಮಮತಾ ಅವರಿಗೆ ಮನವಿ ಮಾಡಿದ್ದೆವು. ಮನವಿಗೆ ಸ್ಪಂದಿಸದ ಕಾರಣ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ತಹಸೀಲ್ದಾರರು ಗೆಂಡೆಹಳ್ಳಿಯಲ್ಲಿ ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಸಂದರ್ಭದಲ್ಲಿ ತಮ್ಮ ವಿರುದ್ಧ ಪ್ರತಿಭಟಿಸಿದವರ ವಿರುದ್ಧವೇ ದಲ್ಲಾಳಿಗಳು ಎಂದಿದ್ದಾರೆ. ಇಲ್ಲಿನ ಸಮಸ್ಯೆಗಳ್ನು ಶೀಘ್ರ ನಿವಾರಿಸದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ಕಿಸಾನ್ ಘಟಕದ ಉಪಾಧ್ಯಕ್ಷ ಮಲ್ಲೇಶ್, ತಾಲೂಕು ಯುವ ಕಾಂಗ್ರೆಸ್ ಕಾರ್ಯದರ್ಶಿ ಸಚಿನ್, ಕಾಂಗ್ರೆಸ್ ಕಿಸಾನ್ ಮೋರ್ಚಾ ಹೋಬಳಿ ಅಧ್ಯಕ್ಷ ಮನುಕುಮಾರ್ ಇದ್ದರು.