ಗುಂಡ್ಲುಪೇಟೆ: ಪ್ರಮುಖ ವಾಣಿಜ್ಯ ಹಾಗೂ ಹೋಬಳಿ ಕೇಂದ್ರವಾದ ತೆರಕಣಾಂಬಿಗೆ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕು ಹಾಗೂ ಜಿಲ್ಲಾ ಕೇಂದ್ರದ ನಡುವೆ ಇರುವ ಗ್ರಾಮವು ಎರಡೂ ತಾಲೂಕುಗಳ ಸುತ್ತಲಿನ ಹತ್ತಾರು ಗ್ರಾಮಗಳ ಸಂಪರ್ಕ ಕೊಂಡಿಯಾಗಿದೆ. ನಾಡ ಕಚೇರಿ, ಎರಡು ಬ್ಯಾಂಕುಗಳು, ರೈತ ಸಂಪರ್ಕ ಕೇಂದ್ರ, ಗ್ರಾಮಪಂಚಾಯಿತಿ, ಪೊಲೀಸ್ ಠಾಣೆ, ರಾಜ್ಯದಲ್ಲಿಯೇ ಪ್ರಖ್ಯಾತವಾದ ಗುರುವಾರದ ಸಂತೆ, ತರಕಾರಿ ಮಾರುಕಟ್ಟೆ, ಎರಡು ಪ್ರೌಢಶಾಲೆಗಳು, ಸರ್ಕಾರಿ ಪದವಿ ಪೂರ್ವ, ಪದವಿ ಹಾಗೂ ಐಟಿಐ ಕಾಲೇಜು ಹೊಂದಿರುವ ಗ್ರಾಮಕ್ಕೆ ಪ್ರತಿ ದಿನವೂ ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ. ಸುತ್ತಮುತ್ತಲಿನ ಗ್ರಾಮಗಳ ನೂರಾರು ಮಕ್ಕಳು ಶಿಕ್ಷಣಕ್ಕಾಗಿ ಗ್ರಾಮದ ಶಾಲಾ, ಕಾಲೇಜುಗಳಿಗೆ ಬರುತ್ತಿದ್ದಾರೆ. ಆದರೆ ಗ್ರಾಮಕ್ಕೆ ಸಮರ್ಪಕ ಬಸ್ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ.
ಕಳೆದ 30-40 ವರ್ಷಗಳಿಂದಲೂ ಗ್ರಾಮಕ್ಕೆ ಮೈಸೂರು, ಬೆಂಗಳೂರು, ಆನೇಕಲ್ ಮುಂತಾದ ಕಡೆಗಳಿಂದ ಸಾಕಷ್ಟು ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ನೆರೆಯ ಕೊಯಮತ್ತೂರಿಗೂ ನೇರ ಬಸ್ ಸಂಪರ್ಕವಿದ್ದುದರಿಂದ ವರ್ತಕರು ಹಾಗೂ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಆದರೆ ಪಟ್ಟಣದಲ್ಲಿ ಡಿಪೋ ಆರಂಭವಾದ ನಂತರ ದೂರದಿಂದ ಬರುತ್ತಿದ್ದ ಬಸ್ಸುಗಳನ್ನು ನಿಲ್ಲಿಸಲಾಗಿದೆ. ಆ ಮಾರ್ಗಗಳಿಗೆ ಇಲ್ಲಿಂದಲೇ ಬಸ್ಸುಗಳು ಸಂಚರಿಸುವಂತೆ ಮಾಡಲಾಗಿತ್ತು. ಆದರೆ ಸಾರಿಗೆ ಅಧಿಕಾರಿಗಳು ಪ್ರಮುಖ ಬಸ್ ಮಾರ್ಗಗಳನ್ನು ನಿಲ್ಲಿಸುವ ಮೂಲಕ ತೀವ್ರ ತೊಂದರೆ ಎದುರಿಸುವಂತಾಗಿದೆ.
ಕೊಯಮತ್ತೂರಿಗೆ ಹೋಗಿ ಬರುತ್ತಿದ್ದ ಬಸ್ಸಿನಲ್ಲಿ ರೈತರು ತಮಗೆ ಅಗತ್ಯವಾದ ಮೋಟಾರು, ಪಂಪ್, ಸ್ಟಾರ್ಟರ್‌ಗಳನ್ನು ತರುತ್ತಿದ್ದರು. ವರ್ತಕರು ಕೊಯಮತ್ತೂರಿನಲ್ಲಿ ಅಗ್ಗವಾಗಿ ದೊರಕುವ ಉಪಕರಣಗಳನ್ನು ತರಿಸಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ತಾಲೂಕಿನಲ್ಲಿ ನೆಲೆಸಿರುವ ತಮಿಳುನಾಡು ಮೂಲದವರು ತಮ್ಮ ಊರುಗಳಿಗೆ ಹೋಗಿ ಬರಲು ಈ ಬಸ್ ಅವಲಂಬಿಸಿದ್ದರು. ಪ್ರತಿ ದಿನವೂ ಸಾವಿರಾರು ರೂ. ಲಾಭ ತರುತ್ತಿದ್ದ ಮಾರ್ಗವನ್ನು ಸಾರಿಗೆ ಇಲಾಖೆ ನಿಲ್ಲಿಸಿದೆ.
ಮೈಸೂರಿನಿಂದ ರಾತ್ರಿ 9 ಗಂಟೆಗೆ ಹೊರಡುವ ಬಸ್ ಗ್ರಾಮದಲ್ಲಿ ಉಳಿದು ಬೆಳಗ್ಗೆ 6 ಗಂಟೆಗೆ ಮತ್ತೆ ಮೈಸೂರಿಗೆ ಹೊರಡುತ್ತಿತ್ತು. ಈ ಬಸ್ಸಿನಲ್ಲಿ ಮೈಸೂರಿಗೆ ಹೋಗುವ ಕಾರ್ಮಿಕರು, ಉದ್ಯೋಗಿಗಳು, ಬೆಂಗಳೂರು ರೈಲಿಗೆ ಹೋಗುವ ಪ್ರಯಾಣಿಕರು, ನಿಯಮಿತವಾಗಿ ಆಸ್ಪತ್ರೆಗಳಿಗೆ ಹೋಗುವ ರೋಗಿಗಳು, ನಂಜನಗೂಡು ಮತ್ತು ಮೈಸೂರಿನ ಕಾಲೇಜುಗಳಿಗೆ ಹೋಗುವ ಅಕ್ಕಪಕ್ಕದ ಗ್ರಾಮಗಳ ವಿದ್ಯಾರ್ಥಿಗಳು ಹೋಗುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಈ ಬಸ್ಸನ್ನು ಚಾಮರಾಜನಗರ ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ಉಳಿಯುವಂತೆ ಮಾಡಲಾಗಿದೆ. ಈಗಾಗಲೇ ಶಕ್ತಿ ಯೋಜನೆಯಿಂದ ಎಲ್ಲ ಬಸ್ಸುಗಳು ತುಂಬಿ ತುಳುಕುತ್ತಿದ್ದು ಗ್ರಾಮದವರು ಈ ಬಸ್ಸಿನಲ್ಲಿ ಕಾಲಿಡಲು ಸಾಧ್ಯವಾಗದಂತಾಗಿದೆ. ಇದರಿಂದ ಹೋಗುವ ವಿದ್ಯಾರ್ಥಿಗಳು ಕಾಲೇಜುಗಳಿಗೆ, ರೋಗಿಗಳು ಆಸ್ಪತ್ರೆಗಳಿಗೆ ಸಕಾಲದಲ್ಲಿ ಹೋಗಲಾಗದೆ ಪರದಾಡುವಂತಾಗಿದೆ.
ಈ ಬಸ್ ಹತ್ತಲಾಗದ ಪ್ರಯಾಣಿಕರು ದುಬಾರಿ ಬೆಲೆ ತೆತ್ತು ಆಟೋಗಳಲ್ಲಿ ಪ್ರಯಾಣಿಸುವಂತಾಗಿದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಗ್ರಾಮಕ್ಕೆ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಗ್ರಾಮದ ದೇಶಪ್ರೇಮಿ ಭಗತ್‌ಸಿಂಗ್ ಟ್ರಸ್ಟ್ ಸದಸ್ಯರು ಒತ್ತಾಯಿಸಿದ್ದಾರೆ.