ಜಿಲ್ಲೆ

ತೆಪ್ಪ ನಡೆಸುವವರಿಗೆ ತ.ನಾಡು ಪೊಲೀಸರ ಕಿರುಕುಳ

ಎ. ಆರ್. ರಘುರಾಮ

ಅಂಬಿಗರ ತೀವ್ರ ಆಕ್ರೋಶ * ವೃತ್ತಿ ಸ್ಥಗಿತಗೊಳಿಸುವ ಎಚ್ಚರಿಕೆ

 ಹನೂರು : ತಮಿಳುನಾಡು ಪೊಲೀಸರು ತೆಪ್ಪ ನಡೆಸುವವರಿಗೆ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಸೂಕ್ತ ರಕ್ಷಣೆ ಒದಗಿಸುವರೆಗೂ ತೆಪ್ಪ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ತಾಲೂಕಿನ ಗಡಿ ಹೊಗೇನಕಲ್ಸ್ ಫಾಲ್ಸ್‌ನ ಅಂಬಿಗರು ಎಚ್ಚರಿಸಿದರು.

ತಮಿಳುನಾಡು ಪೊಲೀಸರು ಕಿರುಕುಳ ನೀಡುತ್ತಿರುವ ಸಂಬಂಧ ಸೋಮವಾರ ಹೊಗೇನಕಲ್ ಫಾಲ್ಸ್ ನದಿ ದಡದಲ್ಲಿ ಅಂಬಿಗರು ನೆರೆದಿದ್ದ ವೇಳೆ ಹಿರಿಯ ಮುಖಂಡ ಪಳನಿಸ್ವಾಮಿ ಮಾತನಾಡಿ, ಫಾಲ್ಸ್ ಬಳಿ 300ಕ್ಕೂ ಹೆಚ್ಚು ಜನರು ತೆಪ್ಪ ನಡೆಸುವುದನ್ನೇ ಮುಖ್ಯ ಕಸುಬಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ.

ಹಲವು ವರ್ಷಗಳಿಂದ ಪ್ರವಾಸಿಗರನ್ನು ಕರೆದೊಯ್ಯುವುದೇ ಕಾಯಕವಾಗಿದೆ. ಹೊಗೇನಕಲ್ ನದಿ ದಡದಿಂದ ತಮಿಳುನಾಡಿನ ದಡಕ್ಕೆ ಪ್ರವಾಸಿಗರನ್ನು ಕರೆದೊಯ್ದು ಮತ್ತೆ ವಾಪಸ್ ಕರೆತರಲಾಗುತ್ತದೆ. ನೆರೆ ರಾಜ್ಯದ ಪೊಲೀಸರು ಇತ್ತೀಚೆಗೆ ಕೆಲ ಅಂಬಿಗರಿಂದ ತೆಪ್ಪದ ಕೋಲು, ಮೊಬೈಲ್ ಫೋನ್ ಕಸಿದುಕೊಂಡು ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಅಂಬಿಗ ವೃತ್ತಿಯವರಿಗೆ ತುಂಬಾ ತೊಂದರೆಯಾಗಿದೆ ಎಂದು ದೂರಿದರು.

ಈ ಬಗ್ಗೆ ಹೊಗೇನಕಲ್‌ನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ತೆಪ್ಪ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಂಗಳವಾರದಿಂದ ತೆಪ್ಪ ಸಂಚಾರ ಸ್ಥಗಿತಗೊಳಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು. ತೆಪ್ಪ ನಡೆಸಲು ಸೂಕ್ತ ಭದ್ರತೆ ಒದಗಿಸಬೇಕು. ಇಲ್ಲವಾದರೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮುಖಂಡ ಪಳನಿಸ್ವಾಮಿ ಎಚ್ಚರಿಸಿದರು.

ಅಂಬಿಗರಾದ ರತ್ನವೇಲು, ಪೆರುಮಾಳ್, ಅಣ್ಣದೊರೈ, ನಂಜಪ್ಪನ್, ಪ್ರಭು ಹಾಗೂ ಇತರರು ಇದ್ದರು.