ಚಿಕ್ಕಬಳ್ಳಾಪುರ: ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊನೇ ಕ್ಷಣದಲ್ಲಿ ಬಿ ಫಾರಂ ನೀಡದ್ದರಿಂದ ಮುನಿಸಿಕೊಂಡು, ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದ ಶಿಡ್ಲಘಟ್ಟದ ಜೆಡಿಎಸ್ ಮಾಜಿ ಶಾಸಕ ಎಂ.ರಾಜಣ್ಣ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜಣ್ಣ ಅವರೊಂದಿಗೆ ಜಿಪಂ ಸದಸ್ಯ ಜಯರಾಮರೆಡ್ಡಿ, ಮುಖಂಡರಾದ ದೊಣ್ಣಹಳ್ಳಿ ರಾಮಣ್ಣ, ರಹಮತ್ ಉಲ್ಲಾ ಸೇರಿ ಹಲವರು ಬಿಜೆಪಿ ಬಾವುಟ ಹಿಡಿದರು.
ನಿಷ್ಠೆಯಿಂದ ದುಡಿದು ಪಕ್ಷ ಸಂಘಟಿಸಲಾಯಿತು. ಆದರೆ, ಹಾಲಿ ಶಾಸಕನಾಗಿದ್ದ ನನಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿ ಫಾರಂ ನೀಡಲಿಲ್ಲ. ವರಿಷ್ಠರು ಸುಳ್ಳು ಭರವಸೆ ಕೊಟ್ಟು ವಂಚಿಸಿದರು. ಬೆನ್ನಿಗೆ ಚೂರಿ ಹಾಕಿದ ಪಕ್ಷದ ಜತೆ ಎಂದೂ ಕೈ ಜೋಡಿಸುವುದಿಲ್ಲ ಎಂದು ಮಾಜಿ ಶಾಸಕ ಎಂ.ರಾಜಣ್ಣ ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್ ಮತ್ತಿತರರು ಇದ್ದರು.