ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಮುಖವಾದ ತೋಟಗಾರಿಕೆ ಬೆಳೆಯಲ್ಲಿ ತೆಂಗು ಕೂಡ ಒಂದಾಗಿದೆ. ಬಹು ಉಪಯೋಗಿ ಉತ್ಪನ್ನವಾಗಿರುವ ತೆಂಗಿನಲ್ಲಿ 30 ಕ್ಕಿಂತಲೂ ಹೆಚ್ಚು ಉಪಉತ್ಪನ್ನಗಳನ್ನು ತಯಾರಿಸಬಹುದಾಗಿದೆ. ಆದರೇ ಜಿಲ್ಲೆಯಲ್ಲಿ ಹೆಚ್ಚಿನ ತೆಂಗು ಸಂಸ್ಕರಣೆ ಆಗುತ್ತಿಲ್ಲ ಎಂದು ತಾಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಪ್ರಭು ಹೇಳಿದರು.
ತೆಂಗಿನಲ್ಲಿ ಅನೇಕ ಗುಡಿ ಕೈಗಾರಿಕೆಗಳನ್ನು ನಡೆಸಲು ಅವಕಾಶವಿದ್ದು, ಸರ್ಕಾರ ಅದಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು. ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ಕೊಬ್ಬರಿ ಎಣ್ಣೆಯನ್ನು ವಿತರಣೆ ಮಾಡಬೇಕು. ಎಂಎಸ್‌ಪಿ ದರದಲ್ಲಿ ರೈತರಿಂದಲೇ ಖರೀದಿ ಮಾಡಬೇಕು. ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸಬೇಕು.
ವೈಜ್ಞಾನಿಕ ಕ್ರಮವನ್ನು ಅನುಸರಿಸಬೇಕು:
ತೆಂಗು ಬೆಳೆಗಳಿಗೆ ಕಾಣಿಸಿಕೊಳ್ಳುತ್ತಿರುವ ರೋಗರುಜನೆಗಳನ್ನು ಹೋಗಲಾಡಿಸುವ ಸಂಬಂಧ ರೈತರಿಗೆ ಇಲಾಖೆ ವತಿಯಿಂದ ಜಾಗೃತಿ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಜಿಲ್ಲೆಯಲ್ಲಿ ತೆಂಗು ಮಾರುಕಟ್ಟೆಯನ್ನು ಸ್ಥಾಪಿಸಿ, ತೆಂಗಿನ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶವನ್ನು ಒದಗಿಸಬೇಕು. ಸದ್ಯಕ್ಕೆ ಮದ್ದೂರಿನಲ್ಲಿ ಎಳನೀರು ಮಾರುಕಟ್ಟೆ ಇದೆ, ಆದರೆ ಮದ್ಯವರ್ತಿಗಳ ಹಾವಳಿಯಿಂದ ರೈತರಿಗೆ ಮೋಸವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ತೆಂಗು ಬೆಳೆಗಾರರ ಸರ್ವೇನಡೆಸಿ, ಅವರಿಗೆ ಮಾರುಕಟ್ಟೆಯನ್ನು ಒದಗಿಸಿದರೆ ತೆಂಗು ಬೆಳೆಯಲ್ಲಿನ ಲಾಭ-ನಷ್ಟದ ಬಗ್ಗೆ ರೈತರಿಗೆ ಜಾಗೃತಿ ಮೂಡುತ್ತದೆ.
ಹಳ್ಳಿಕೆರೆಹುಂಡಿ ಭಾಗ್ಯರಾಜ್, ರೈತ ಮುಖಂಡ, ಚಾಮರಾಜನಗರ