ಜಿಲ್ಲೆ

ತೆಂಗು ಬೆಳೆಗೆ ಬಿಳಿನೊಣ ಬಾಧೆ

ತಜ್ಞರ ವರದಿ ತಯಾರಿಸಲು ದಿಶಾ ಸಮಿತಿ ಸಭೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಸೂಚನೆ

ತುಮಕೂರು: ಜಿಲ್ಲೆಯಲ್ಲಿ ತೆಂಗು ಮರಗಳಲ್ಲಿ ಕಾಣಿಸಿಕೊಂಡಿರುವ ರೋಗದಿಂದ ಇಳುವರಿ ಕಡಿಮೆಯಾಗಿದ್ದು, ಭವಿಷ್ಯದಲ್ಲಿ ತೆಂಗು ಜತೆಗೆ ಅದನ್ನು ಬೆಳೆಯುವವನ ಬದುಕು ಕೂಡ ಕಳೆದುಹೋಗುವ ಅಪಾಯವಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಕಳವಳ ವ್ಯಕ್ತಪಡಿಸಲಾಯಿತು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಶಿರಾ ಶಾಸಕ ಟಿ.ಬಿ.ಜಯಚಂದ್ರ ತೆಂಗು ಬೆಳೆಗೆ ಬಂದಿರುವ ಬಿಳಿನೋಣ ರೋಗದ ಬಗ್ಗೆ ವಿಷಯ ಪ್ರಸ್ತಾಪಿಸಿದರು, ಮಳೆಗಾಲದಲ್ಲಿಯಾದರೂ ರೋಗ ಸ್ವಾಭಾವಿಕವಾಗಿ ಹೋಗದಿದ್ದರೆ ತೆಂಗು ಬೆಳೆಗಾರರಿಗೆ ಉಳಿಗಾಲವಿಲ್ಲ ಎಂದರು.

ಈ ಬಗ್ಗೆ ತೋಟಗಾರಿಕೆ ಇಲಾಖೆ ಬಳಿ ಯಾವ ಮಾಹಿತಿ ಇದೆ, ರೋಗ ನಿಯಂತ್ರಣಕ್ಕೆ ಪರಿಹಾರೋಪಾಯವೇನು ಎಂಬ ಬಗ್ಗೆ ಸಚಿವ ವಿ.ಸೋಮಣ್ಣ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮಗೆ ಪ್ರಶ್ನಿಸಿದರು. ರೋಗ ಬಂದಿದೆ ಆದರೆ, ಎಷ್ಟು ಪ್ರಮಾಣದಲ್ಲಿ ಬಂದಿದೆ ಹಾಗೂ ಪರಿಹಾರವೇನು ಎಂಬ ಬಗ್ಗೆ ಇಲಾಖೆ ಯಾವುದೇ ಸಮೀೆ ನಡೆಸಿಲ್ಲ ಎಂದರು.

ಅಧಿಕಾರಿಗಳ ಉತ್ತರದಿಂದ ಸಿಟ್ಟಾದ ಸೋಮಣ್ಣ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೋಟಗಳಿಗೆ ಹೋಗಿಲ್ಲ, ಅಂಕಿ, ಅಂಶವನ್ನೇ ಸಂಗ್ರಹಿಸಿಲ್ಲ, ಅಂದಾಜು 62 ಎಕರೆ ಎಂದು ಮಾಹಿತಿ ನೀಡಿದರೆ ಹೇಗೆ?. ರೋಗಕ್ಕೆ ಪರಿಹಾರವೇನು ಎಂದು ತರಾಟೆಗೆ ತೆಗೆದುಕೊಂಡರು.

ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಗೋವಿಂದೇಗೌಡ ಮಾತನಾಡಿ, ಜಿಲ್ಲೆಯ ಬಹುತೇಕ ತೆಂಗಿನ ತೋಟಗಳಲ್ಲಿ ಬಿಳಿನೋಣದಿಂದ ತೆಂಗಿನ ಗರಿಯ ಕಳೆಭಾಗದಲ್ಲಿ ನಾಶವಾಗಿದೆ. ಇದರಿಂದ ಇಳುವರಿ ಕೂಡ ಕಡಿಮೆಯಾಗಿದ್ದು ತೆಂಗಿನಕಾಯಿ, ಎಳೆನೀರು ಬೆಲೆ ಜಾಸ್ತಿಯಾಗಿದೆ. ಜೋರಾಗಿ ಮಳೆ ಬಂದರೆ ಸ್ವಾಭಾವಿಕವಾಗಿ ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂದರು.

ಪ್ರತಿಕ್ರಿಯಿಸಿದ ಟಿ.ಬಿ.ಜಯಚಂದ್ರ, ಮಳೆ ಬಂದಾಗ ಹೋಗುವುದಿದ್ದರೆ ಒಳ್ಳೆಯದು. ಆದರೆ, ಆ ಲಕ್ಷಣಗಳು ಕಾಣಿಸುತ್ತಿಲ್ಲ. ಕೆಲವು ಪ್ರಗತಿಪರ ರೈತರು ಬೇವಿನ ಎಣ್ಣೆಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪಡಿಸಿದ್ದು, ಕೊಂಚ ಕಡಿಮೆಯಾಗಿದೆ ಎನ್ನಿಸುತ್ತಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ರೈತರಿಗೆ ಉಚಿತವಾಗಿ ಬೇವಿನ ಎಣ್ಣೆ ನೀಡುವ ಬಗ್ಗೆ ಚಿಂತಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ತೆಂಗಿನ ಮರಗಳಿಗೆ ಬಂದಿರುವ ಸಮಸ್ಯೆ ಬಗ್ಗೆ ಕೋಕೊನಟ್​ ಬೋರ್ಡ್​ಗೆ ಪತ್ರ ಬರೆದು ಪರಿಹಾರ ಕಂಡುಕೊಳ್ಳೋಣ, ಕೂಡಲೇ ಜಿಲ್ಲೆಯಲ್ಲಿ ಒಂದು ಸಮೀೆ ನಡೆಸಿ ವರದಿ ತಯಾರಿಸಿಕೊಡಿ ಎಂದು ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಜಲ್​ ಜೀವನ್​ ಮಿಷನ್​ ಯೋಜನೆಯಡಿ ಮಾರ್ಚ್​ ಅಂತ್ಯಕ್ಕೆ 4 ಬ್ಯಾಚ್​ಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈವರೆಗೂ 3699 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯಾಗಿದ್ದು, ಈ ಪೈಕಿ 3256 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ಈವರೆಗೂ 1449 ಕಾಮಗಾರಿಗಳು ಪೂರ್ಣಗೊಂಡಿದ್ದು, 1372 ಕಾಮಗಾರಿಗಳು ಪ್ರಗತಿಯಲ್ಲಿವೆ. ಇದಕ್ಕಾಗಿ 585 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಜಿಪಂ ಸಿಇಒ ಜಿ.ಪ್ರಭು ಅಂಕಿ, ಅಂಶಗಳ ವರದಿ ಒಪ್ಪಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಮೀನು ಸಾಕಣೆ ಕೆರೆಗಳ ಹರಾಜು ಹಕ್ಕನ್ನು ಆಯಾ ಗ್ರಾಮಪಂಚಾಯತಿಗಳಿಗೆ ನೀಡಬೇಕು. ಇದರಿಂದ ಪಂಚಾಯತಿಗೆ ಆದಾಯ ಬರಲಿದೆ ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಶಿವಶಂಕರ್​ಗೆ ಸೂಚಿಸಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್​ ಯೋಜನೆ, ಪ್ರಧಾನ ಮಂತ್ರಿ ಆವಾಸ್​ ಯೋಜನೆ, ಆಯುಷ್ಮಾನ್​ ಭಾರತ್​ ಕಾರ್ಡ್​ ವಿತರಣೆ, ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರ, ವಿಶ್ವಕರ್ಮ ಸಮುದಾಯಕ್ಕೆ ಒದಗಿಸಲಾಗುತ್ತಿರುವ ತರಬೇತಿ ಹಾಗೂ ಶಿಷ್ಯವೇತನ ಸೇರಿದಂತೆ ವಿವಿಧ ಕೇಂದ್ರ ಪುರಸತ ಯೋಜನೆಗಳ ಬಗ್ಗೆ ಅಧಿಕಾರಿಗಳು ವರದಿ ಒಪ್ಪಿಸಿದರು. ದಿಶಾ ಸಮಿತಿ ಸದಸ್ಯ ವೈ.ಎಚ್​. ಹುಚ್ಚಯ್ಯ ಮಾತನಾಡಿ, ಬಿದರೆಹಳ್ಳ ಕಾವಲ್​ನಲ್ಲಿ ಹೆಲಿಕಾಪ್ಟರ್​ ಘಟಕ ನಿಮಾರ್ಣಕ್ಕಾಗಿ ಜಮೀನು ಕಳೆದುಕೊಂಡವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವುದು ಬೇಸರದ ಸಂಗತಿ. ಈ ಕುಟುಂಬಗಳಿಗೆ ಆದ್ಯತೆ ನೀಡಿ ಉದ್ಯೋಗ ನೀಡಬೇಕು ಎಂದು ಸಭೆಗೆ ಮನವಿ ಮಾಡಿದರು.

ಅರಣ್ಯ ಒತ್ತುವರಿ ತೆರವುಗೊಳ್ಳಿಸಿ: ಜಿಲ್ಲೆಯಲ್ಲಿ ಅರಣ್ಯ ಒತ್ತುವರಿಯಾಗಿರುವ ಪ್ರದೇಶ ಗುರುತಿಸಿ ಒತ್ತುವರಿ ತೆರವಿಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಅರಣ್ಯ ಒತ್ತುವರಿಯಿಂದ ಸಾಮಾಜಿಕ ಅರಣ್ಯ ನಾಶವಾಗುತ್ತಿದೆ. ಒತ್ತುವರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ರಸ್ತೆಗಳು ಹದಗೆಟ್ಟ ಸ್ಥಿತಿಯಲ್ಲಿವೆ. ರಸ್ತೆ ಸಂಪರ್ಕವಿಲ್ಲದಿರುವ ಗ್ರಾಮಗಳ ಮಾಹಿತಿ ಪಡೆದು ಸದರಿ ಗ್ರಾಮಗಳಿಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜೆಜೆಎಂ ಕಾಮಗಾರಿ ಹೆಸರಿನಲ್ಲಿ ಲೂಟಿ: ಶಾಸಕ ಬಿ.ಸುರೇಶ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜೆಜೆಎಂ ಕಾಮಗಾರಿ ಹೆಸರಿನಲ್ಲಿ ಲೂಟಿ ನಡೆದಿದ್ದು, ಅಧಿಕಾರಿಗಳು ಹಣ ಹೊಡೆಯಲು ಇಟ್ಟುಕೊಂಡಿದ್ದಾರೆ. ಕೇವಲ ಕಾಗದದ ಮೇಲೆ ಮಾತ್ರ ಜೆಜೆಎಂ ಕಾಮಗಾರಿ ಬಗ್ಗೆ ಅಂಕಿ, ಅಂಶಗಳನ್ನು ತಿಳಿಸುತ್ತಿದ್ದಾರೆ ಎಂದು ದೂರಿದರು. ತುಮಕೂರು ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 11 ಘಟಕಗಳಿದ್ದು, ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಇಚ್ಛಾಶಕ್ತಿ ಅಧಿಕಾರಿಗಳಿಗಿಲ್ಲ ಎಂದರು. ಪ್ರತಿಕ್ರಿಯಿಸಿದ ಸೋಮಣ್ಣ ಕೂಡಲೇ ದುರಸ್ತಿಯಲ್ಲಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಘಟಕಗಳನ್ನು ಸುಸ್ಥಿತಿಗೆ ತರಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್​ಗೆ ಸೂಚಿಸಿದರು.

ಸರ್ಕಾರಿ ಶಾಲೆಗೆ ಸೌಲಭ್ಯ ಕಲ್ಪಿಸಿ: ಬಹುತೇಕ ಗ್ರಾಮೀಣ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಸರ್ಕಾರಿ ಶಾಲೆಗಳ ಕಟ್ಟಡಗಳ ಸ್ಥಿತಿ ಉತ್ತಮವಾಗಿಲ್ಲದಿರುವುದನ್ನು ಕೊರಟಗೆರೆ ಮತ್ತು ಮಧುಗಿರಿ ತಾಲೂಕುಗಳಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಗಮನಿಸಿದ್ದೇನೆ. ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳು, ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಮಧುಗಿರಿ ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಿಗೆ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಸಂಸದರಾದ ಗೋವಿಂದ ಕಾರಜೋಳ, ಡಾ.ಮಂಜುನಾಥ್​, ಶಾಸಕ ಜಿ.ಬಿ.ಜ್ಯೋತಿಗಣೇಶ್​, ಎಂ.ಟಿ.ಕೃಷ್ಣಪ್ಪ, ಶುಭಕಲ್ಯಾಣ್​, ಎಸ್ಪಿ ಕೆ.ವಿ.ಅಶೋಕ್​, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಇದ್ದರು.