ಚನ್ನರಾಯಪಟ್ಟಣ: ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 16,730 ರೂ. ದರ ನಿಗದಿಗೊಳಿಸಿ, ಖರೀದಿ ಕೇಂದ್ರಗಳನ್ನು ತೆರೆಯಬೇಕು ಮತ್ತು ಕೇಂದ್ರ ಸರ್ಕಾರದ ತಪ್ಪು ಅಮದು ನೀತಿ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷೃ ಧೋರಣೆ ಖಂಡಿಸಿ, ತೆಂಗು ಬೆಳೆಗಾರರು ಕರ್ನಾಟಕ ಪ್ರಾಂತ್ಯ ರೈತ ಸಂಘದ ನೇತೃತ್ವದಲ್ಲಿ ಜು.19ರಂದು ವಿಧಾನ ಸೌಧ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಮುಖಂಡ ಹೆಚ್.ಎಸ್.ಮಂಜುನಾಥ್ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 6.46 ಲಕ್ಷ ಹೆ.ಪ್ರದೇಶದಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದೆ. ವಾರ್ಷಿಕವಾಗಿ 2.18 ಲಕ್ಷ ಮೆಟ್ರಿಕ್ ಟನ್‌ನಷ್ಟು ಕೊಬ್ಬರಿ ಉತ್ಪಾದನೆಯಾಗುತ್ತಿದೆ. ಇಂತಹ ಪ್ರಮುಖ ಬೆಳೆಯಾದ ಕೊಬ್ಬರಿ ಬೆಲೆಯು ಹಿಂದೆಂದೂ ಕೇಳಿರದ ಪ್ರಮಾಣದಲ್ಲಿ ಕ್ವಿಂಟಾಲ್‌ಗೆ 6 ರಿಂದ 7 ಸಾವಿರ ರೂ.ಗೆ ಕುಸಿದಿದೆ. ಕೊಬ್ಬರಿಯ ಬೆಲೆ ನೆಲಕಚ್ಚಿರುವುದು ತೆಂಗು ಬೆಳೆಯುವ ಪ್ರದೇಶದ ರೈತರಲ್ಲಿ ಆತಂಕವನ್ನು ಉಂಟುಮಾಡಿದೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ತೋಟಗಾರಿಕಾ ಇಲಾಖೆಯು, ಕೇಂದ್ರ ಸರ್ಕಾರದ ಕೃಷಿ ವೆಚ್ಚ ಮತ್ತು ದರ ಆಯೋಗಕ್ಕೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 16,730 ರೂ.ಗಳನ್ನು ನೀಡಬೇಕು ಎಂದು ಉತ್ಪಾದನಾ ವೆಚ್ಚದ ಆಧಾರದಲ್ಲಿ ಶಿಫಾರಸ್ಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಬೆಂಬಲ ಬೆಲೆಯಾಗಿ ಕೇವಲ 11,750 ರೂ ಮಾತ್ರ ನಿಗದಿಪಡಿಸಿದೆ. ರೈತರ ಆಗ್ರಹಕ್ಕೆ ಮಣಿದು ರಾಜ್ಯ ಸರ್ಕಾರವು ಪ್ರತಿ ಕ್ವಿಂಟಾಲ್ ಕೊಬ್ಬರಿ ಗೆ 1,250 ರೂ. ನಿಗದಿ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ಕೇವಲ 6,500 ರೂ ಮಾತ್ರ ಇದೆ. ಸರ್ಕಾರಗಳು ಘೋಷಿಸಿರುವ ಬೆಂಬಲ ಬೆಲೆ ಜಾರಿಗೆ ಬರಬೇಕಾದರೆ ಖರೀದಿ ಕೇಂದ್ರಗಳನ್ನು ವ್ಯಾಪಕವಾಗಿ ತೆರೆಯಬೇಕು. ಸಮರ್ಪಕ ಖರೀದಿ ಕೇಂದ್ರಗಳು ಇಲ್ಲದೇ ಇದ್ದರೆ ಬೆಂಬಲ ಬೆಲೆ ಕೇವಲ ಕಾಗದದಲ್ಲಿ ಮಾತ್ರ ಉಳಿಯುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತೆಂಗು ಬೆಳೆಗಾರರ ಹೋರಾಟ ಸಮಿತಿಯ ಸಂಚಾಲಕರಾದ ಮಿಲ್ಟ್ರಿ ಮಂಜು, ರಾಮಚಂದ್ರ ವಳಗೇರಹಳ್ಳಿ, ಸಿಐಟಿಯುನ ತಾಲೂಕು ಅಧ್ಯಕ್ಷ ಕರಿಯಪ್ಪ, ಮುಖಂಡ ಲೋಕೇಶ್ ಇತರರಿದ್ದರು.