ಜಿಲ್ಲೆ

ತೆಂಗು ಉಳಿವಿಗೆ ಸರ್ಕಾರ, ಸಂಶೋಧನಾ ಸಂಸ್ಥೆಗಳ ಸಹಕಾರ ಅಗತ್ಯ

ಹಾಸನ: ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಆಯೋಜಿಸಿದ್ದ ತೆಂಗು ಬೆಳೆ ರೋಗ ನಿರ್ವಹಣೆ ಕುರಿತ ಮೊದಲ ಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಭಾಗಿಯಾಗಿ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿದರು.

ಕಾಸರಗೋಡಿನಐಸಿಎಆರ್-ಸಿಪಿಸಿಆರ್‌ಐ ಸಂಸ್ಥೆ ಆಯೋಜಿಸಿದ್ದ ಸಭೆಯಲ್ಲಿ ತೆಂಗಿನ ತೋಟಗಳಿಗೆ ಕೀಟ ಮತ್ತು ರೋಗಗಳಿಂದ ಉಂಟಾಗುತ್ತಿರುವ ಹಾನಿ, ರೈತರ ಆರ್ಥಿಕ ಹಿತಾಸಕ್ತಿ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಮಗ್ರ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು.

ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ ನಂತರ ಕಡೂರು ಭಾಗಗಳಲ್ಲಿ ಹೆಚ್ಚಾಗಿ ತೆಂಗು ಬೆಳೆಯಲಾಗುತ್ತಿದೆ. ಇದನ್ನೇ ಜೀವನಾಧಾರವಾಗಿಸಿಕೊಂಡಿರುವ ರೈತರು, ರೋಗಗಳ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಬದುಕು ಸುಧಾರಿಸಬೇಕು. ಪ್ರಮುಖ ವಾಣಿಜ್ಯ ಬೆಳೆ ತೆಂಗಿನ ಬೆಳೆ ಉಳಿವಿಗೆ ಸರ್ಕಾರ ಹಾಗೂ ಸಂಶೋಧನಾ ಸಂಸ್ಥೆಗಳ ಸಹಕಾರ ಅಗತ್ಯವಿದೆ ಎಂದು ಸಂಸದರು ಒತ್ತಿ ಹೇಳಿದರು.

ಸಭೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ಡಾ.ಸಿ.ಎನ್. ಮಂಜುನಾಥ, ಐಸಿಎಆರ್ ನಿರ್ದೇಶಕ ಡಾ.ಕೆ.ಬಾಲಚಂದ್ರ ಹೆಬ್ಬಾರ್ ಸೇರಿದಂತೆ ಅಧಿಕಾರಿಗಳು ಇದ್ದರು.