ಜಿಲ್ಲೆ

ತೆಂಗಿನ ಕಾಯಿಗೆ ಗುಂಡು ಹೊಡೆದ ಸ್ಪರ್ಧಿಗಳು

ಗೋಣಿಕೊಪ್ಪ: ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 450ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿ ಗಮನ ಸೆಳೆದರು.


ಮೂರು ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. 50 ಮೀಟರ್ ದೂರದಲ್ಲಿರುವ ತೆಂಗಿನ ಕಾಯಿಗೆ .22 ಕೋವಿ, 30 ಮೀ. ದೂರದ ಕಾಯಿಗೆ 12 ಬೋರ್ ಕೋವಿಯಲ್ಲಿ ಸ್ಪರ್ಧೆ, 18 ಮೀ. ದೂರದ ಮೊಟ್ಟೆಗೆ ಎರ್‌ಗನ್‌ನಲ್ಲಿ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಪಾಲ್ಗೊಂಡರು. ಸಣ್ಣ ಮಕ್ಕಳು ಮೊಟ್ಟೆ, ತೆಂಗಿನ ಕಾಯಿಗೆ ಗುರಿ ಗುಂಡು ಹೊಡೆದು ಸಂಭ್ರಮಿಸಿದರು.


ಗ್ರಾಮದ ಹಿರಿಯ ಸಮಾಜ ಸೇವಕಿ ಚೆಪ್ಪುಡೀರ ರಾಧಾ ಅಚ್ಚಯ್ಯ ತೆಂಗಿನ ಕಾಯಿಗೆ ಗುಂಡು ಹೊಡೆದು ಸ್ಪರ್ಧೆಗೆ ಚಾಲನೆ ನೀಡಿದರು. ಆರ್‌ಎಸ್‌ಎಸ್ ಸಂಘ ಚಾಲಕ ಚೆಕ್ಕೇರ ಮನು ಕಾವೇರಪ್ಪ ಮಾತನಾಡಿ, ಕ್ಷತ್ರಿಯ ವಂಶಕ್ಕೆ ಸೇರಿರುವ ಕೊಡವರು ಯುದ್ಧ ಮತ್ತು ದೈಹಿಕ ಶಕ್ತಿಯಿಂದ ಹೋರಾಡಿ ಸಮಾಜವನ್ನು ರಕ್ಷಣೆ ಮಾಡಿದ ಹಿನ್ನೆಲೆ ಇದೆ. ಕೋವಿ ಬಳಕೆಯಿಂದ ನಮ್ಮ ಆತ್ಮಸ್ಥೈರ್ಯ ವೃದ್ಧಿಸುತ್ತದೆ. ಇದರಿಂದ ಗುಂಡು ಹೊಡೆಯುವ ಸ್ಪರ್ಧೆ ಹೆಚ್ಚಾಗಬೇಕಿದೆ. ಕೊಡವರು ಹಿಂದುಗಳೇ ಎಂದು ಹೇಳಿಕೆ ನೀಡುವ ಮೂಲಕ ಕೆಲವರು ಹಿಂದುತ್ವಕ್ಕೆ ಅಪಮಾನ ಮಾಡುತ್ತಿರುವುದನ್ನು ಖಂಡಿಸಲಾಗುವುದು. ಇಂತಹವರಿದ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಲಿದೆ. ಕೊಡವರನ್ನು ಪ್ರಶ್ನಿಸುವುದು ಅಪಮಾನ ಮಾಡಿದಂತೆ ಎಂದರು.


ಕಾಫಿ ಬೆಳೆಗಾರ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ಕಾಳಪಂಡ ಸುಧೀರ್, ಸಣ್ಣುವಂಡ ಎಂ.ಸುರೇಶ್, ಪತ್ರಕರ್ತರ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.