ಬಾಗಲಕೋಟೆ ನಗರದ ಪ್ರೆಸ್ ಕ್ಲಬ್ ನಲ್ಲಿ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯುವ ಘಟಕದ ಜಿಲ್ಲಾಧ್ಯಕ್ಷ ಆತ್ಮಾರಾಮ ನೀಲನಾಯಕ, ಸಂಘಟನಾ ಕಾರ್ಯದರ್ಶಿ ಮಲ್ಲು ಕಟ್ಟಿಮನಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯಾ ಬೆಟಗೇರಿ, ನಗರ ಅಧ್ಯಕ್ಷ ಬಸವರಾಜ ಅಂಬಿಗೇರ ಉಪಸ್ಥಿತರಿದ್ದರು. 
ಜಿಲ್ಲೆ

ತೃತೀಯ ಸಂಸ್ಥೆ ಮೂಲಕ ತನಿಖೆ ಮಾಡಿ

ಬಾಗಲಕೋಟೆ: ನವನಗರದಲ್ಲಿ ಗ್ರೀನ್ ಫುಡ್ ಪಾರ್ಕ ಲಿಮಿಟೆಡ್ ಕಂಪನಿಗೆ ಹಂಚಿಕೆಯಾಗಿದ್ದ 100 ಎಕರೆ ಪೈಕಿ ಹಿಂಪಡೆದ 53 ಎಕರೆ 25 ಗುಂಟೆ ಭೂಮಿಯನ್ನು ಕಾನೂನುಬಾಹೀರವಾಗಿ ಬೆಳಗಾವಿಯ ಗುರುದತ್ತ ಇಂಟಿಗ್ರೇಟೆಡ್ ಟೆಕ್ಸಟೈಲ್ಸ್ ಪಾರ್ಕ ಕಂಪನಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಸಚಿವರು, ಅಧಿಕಾರಿಗಳ ಕೈವಾಡ ಅಡಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಆರೋಪಿಸಿದರು.
ಬೆಳಗಾವಿ ಮೂಲದ ಗುರುದತ್ತ ಕಂಪನಿ ಸಚಿವರ ಬೇನಾಮಿ ಕಂಪನಿಯಾಗಿದೆ ಎಂಬ ಸಂಶಯವಿದೆ. 53.25 ಎಕರೆ ಭೂಮಿಯನ್ನು ತರಾತುರಿ ಹಂಚಿಕೆಯಲ್ಲಿ ಕೈಗಾರಿಕೆ ಸಚಿವರ, ಕೆಐಎಡಿಬಿ ಅಧಿಕಾರಿಗಳ ಹಿತಾಸಕ್ತಿ ಅಡಗಿದೆ. ಬಾಗಲಕೋಟೆ ಶಾಸಕರು ಈ ಬಗ್ಗೆ ಗಮನ ಹರಿಸದೇ ಇರುವುದು ದುರಂತ ಸಂಗತಿ. ಇದರಲ್ಲಿರುವ ಸತ್ಯಾಂಶ ತಿಳಿಸಲು ತೃತೀಯ ಸಂಸ್ಥೆಗಳ ಮೂಲಕ ತನಿಖೆ ನಡೆಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಗ್ರೀನ್ ಫುಡ್ ಪಾರ್ಕ ಕಂಪನಿಯಿಂದ ಹಿಂಪಡೆದ 53.22 ಎಕರೆ ಭೂಮಿಯನ್ನು ಹಂಚಿಕೆ ಮಾಡಲು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರಾ ? ಗುರುದತ್ತ ಇಂಟಿಗ್ರೇಟೆಡ್ ಟೆಕ್ಸಟೈಲ್ಸ್ ಪಾರ್ಕ ಕಂಪನಿ ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆಯೇ ಅಥವಾ ಬೇನಾ ಕಂಪನಿಯೇ ? ಹಿಂಪಡೆದ 53.22 ಎಕರೆ ಪೈಕಿ 53.25 ಎಕರೆ ಭೂಮಿಯನ್ನು ಹಂಚಿಕೆ ಮಾಡಿದ್ದಿರಲ್ಲ ಹೆಚ್ಚುವರಿ 3 ಗುಂಟೆ ಹೈಟೆಕ್ ಹಾಲಿನ ಡೈರಿ ಕಟ್ಟಡವೇ ? ಅಂತ ಪ್ರಶ್ನಿಸಿದರು.
ಇನ್ನು ಮೀಸಲಾತಿ ಅನುಸಾರ ಭೂಮಿ ಹಂಚಿಕೆ ಮಾಡಬೇಕಿತ್ತು. ಏಕೆ ಮಾಡಿಲ್ಲ. ಕೋಟ್ಯಂತರ ರೂ. ಮೌಲ್ಯದ ಭೂಮಿ ಒಂದೇ ಕಂಪನಿಗೆ ನೀಡಿರುವ ಉದ್ದೇಶದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಯೋಜನೆಗಳ ದುರ್ಬಳಕೆ ಮಾಡಿಕೊಳ್ಳಲು ಮಾಡಿದ ಪಿತೂರಿನಾ? ಅಂತ ಪ್ರಶ್ನೆಗಳ ಸುರಿ ಮಳೆಗೈದರು.
ನವನಗರದಲ್ಲಿ ಜನರಿಗೆ ಉದ್ಯೋಗ ನೀಡಲು ಕೈಗಾರಿಕೆ ಸ್ಥಾಪಿಸಲು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ 300 ಎಕರೆ ಜಮೀನು ಕೆಐಡಿಬಿಗೆ ಹಸ್ತಾಂತರ ಮಾಡಿತ್ತು. 2005 ರಲ್ಲಿ ಆಹಾರ ಉತ್ಪನ್ನಗಳ ತಯಾರಿಕೆ ಮತ್ತು ಸಂಗ್ರಹಾಗಾರಗಳ ನಿರ್ಮಾಣಕ್ಕಾಗಿ ಉದ್ಯಮಗಳನ್ನು ಸ್ಥಾಪಿಸಲು ರಸ್ತೆ, ವಿದ್ಯುತ್, ನೀರು, ಚರಂಡಿ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲು 5 ವರ್ಷಗಳ ಕಾಲಮಿತಿಯೊಳಗೆ ಆಂಧ್ರ ಮೂಲದ ಗ್ರೀನ್ ಫುಡ್ ಪಾರ್ಕ್ ಲಿಮಿಟೆಡ್ ಜಂಟಿ ಸಹಭಾಗಿತ್ವ ಕಂಪನಿಗೆ ಎಕರೆಗೆ 1 ಲಕ್ಷ ರೂ.ಗಳಂತೆ 100 ಎಕರೆ ಭೂಮಿಯನ್ನು ಗುತ್ತಿಗೆ ನೀಡಲಾಗಿತ್ತು. 16 ವರ್ಷವಾದರು ಅಭಿವೃದ್ಧಿ ಮಾಡಲಿಲ್ಲ. ಒಂದು ಉದ್ಯೋಗ ಸೃಷ್ಟಿ ಮಾಡಲಿಲ್ಲ. ಈ ಬಗ್ಗೆ ಕರವೇ ಹೋರಾಟ ನಡೆಸಿದ ಪರಿಣಾಮ 100 ಎಕರೆ ಭೂಮಿ ಪೈಕಿ 30-10-2021 ರಂದು ನಡೆದ 375ನೇ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಭೆಯಲ್ಲಿ 53 ಎಕರೆ 25 ಗುಂಟೆ ಭೂಮಿ ವಾಪಸ್ಸ್ ಪಡೆಯಲು ನಿರ್ಣಯಿಸಲಾಗಿದೆ.
14-1-2022 ರಂದು ನಡೆದ ಸಭೆಯಲ್ಲಿ ಮಂಡಳಿಯು ಭೂಮಿ ವಶಕ್ಕೆ ಪಡೆದುಕೊಂಡಿತು. ಕೇವಲ 15 ದಿನ ಅಂತರದಲ್ಲಿ 29-1-2022 ರಂದು ಲಕ್ಷ್ಮೀಕಾಂತ ದಗದುಲಾಲ ಮಾಲೀಕತ್ವದ ಬೆಳಗಾವಿಯ ಗುರುದತ್ತ ಇಂಟಿಗ್ರೇಟೆಡ್ ಟೆಕ್ಸಟೈಲ್ಸ್ ಪಾರ್ಕ ಕಂಪನಿಗೆ ಉದ್ದಿಮೆ ಸ್ಥಾಪಿಸಲು 80 ಎಕರೆ ಭೂಮಿಯನ್ನು ಹಂಚಿಕೆ ಮಾಡಲು ವಿನಂತಿಸಿದ ಕುರಿತು ಉಲ್ಲೇಖಿಸಿ ಶಿಫಾರಸ್ಸು ಮಾಡಲಾಗಿತ್ತು. ಒಂದು ದಿನದ ಅಂತರದಲ್ಲಿ 31-1-2022 ರಂದು ನಡೆದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಏಕಗವಾಕ್ಷಿ ಭೂ ವಿಲೇವಾರಿ ಸಮಿತಿಯ ಸಭೆಯಲ್ಲಿ ಹಿಂಪಡೆದ 53 ಎಕರೆ 22 ಗುಂಟೆ ಭೂಮಿಯನ್ನು ಗುರುದತ್ತ ಕಂಪನಿಗೆ ನೀಡಲಾಗಿದೆ ಎಂದು ಆರೋಪಿಸಿದರು.
ನಿಯಮಗಳ ಪ್ರಕಾರ ಯಾವುದು ನಡೆದುಕೊಂಡಿಲ್ಲ. ಭೂಮಿ ಹಂಚಿಕೆ ಕುರಿತು ಪತ್ರಿಕಾ ಪ್ರಕಟಣೆ ನೀಡಿಲ್ಲ. ಮೀಸಲಾತಿ ಅನ್ವಯ ಭೂಮಿ ಹಂಚಿಕೆ ಮಾಡಿಲ್ಲ. ಕೂಡಲೇ 53.25 ಎಕರೆ ಭೂಮಿಯನ್ನು ಮೀಸಲಾತಿ ಅನುಸಾರ ಹಂಚಿಕೆ ಮಾಡಲು ಆದೇಶಿಸಬೇಕು ಹಾಗೂ ಈಗ ಆಗಿರುವ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ತೃತೀಯ ಸಂಸ್ಥೆಗೆ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ಆತ್ಮಾರಾಮ ನೀಲನಾಯಕ, ಸಂಘಟನಾ ಕಾರ್ಯದರ್ಶಿ ಮಲ್ಲು ಕಟ್ಟಿಮನಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯಾ ಬೆಟಗೇರಿ, ನಗರ ಅಧ್ಯಕ್ಷ ಬಸವರಾಜ ಅಂಬಿಗೇರ ಉಪಸ್ಥಿತರಿದ್ದರು.