ಬಾಗಲಕೋಟೆ: ಸರ್ಕಾರ ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ೧೦೦ ಕೋಟಿ ರೂ.ಗಳ ಅನುದಾನ ನೀಡಬೇಕು ಎಂದು ಚಿತ್ರನಟ ಚೇತನ ಆಗ್ರಹಿಸಿದರು.
ನಗರದ ಪ್ರೇಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆ ಕಲ್ಪಿಸಬೇಕಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನವಾದ ಅವಕಾಶ, ಸಾಮಾಜಿಕ ಭದ್ರತೆ ಒದಗಿಸಿ ಸಮಾಜದಲ್ಲಿ ಅವರಿಗೆ ಸ್ವಾಭಿಮಾನದ ಬದುಕು ಕಲ್ಪಿಸಬೇಕು. ಎಲ್ಲರಂತೆ ಅವರು ಕೂಡಾ ಜೀವನ ಮಾಡಬೇಕು. ಇದಕ್ಕೆ ಸರ್ಕಾರದ ನೆರವು ಅಗತ್ಯವಾಗಿ ಬೇಕಿದೆ ಎಂದರು.
ರಾಜ್ಯದ ೫ ಜಿಲ್ಲೆಗಳಲ್ಲಿ ಜೋಗಪ್ಪ ಜನಾಂಗ ಇದೆ. ಕಲಾವಿದರು ಪಾರಂಪರಿಕ ಕಲೆ ಉಳಿಸಿ ಬೆಳೆಸುತ್ತಿದ್ದಾರೆ. ಸಾಂಸ್ಕೃತಿಕ ಪರಂಪರೆ ಹೊಂದಿದ್ದಾರೆ, ಯಲ್ಲಮ್ಮನ ಪೂಜೆ ಮಾಡುತ್ತಾರೆ, ಅವರುಗಳಿಗೆ ಸುಂದರವಾದ ಬದುಕು ಕಟ್ಟಿಕೊಡುವ ಕೆಲಸವಾಗಬೇಕು. ಈ ದಿಸೆಯಲ್ಲಿ ಅವರಿಗೆ ನ್ಯಾಯ ಒದಗಿಸಲು ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ೧೦೦ ಕೋಟಿ ರೂ.ಗಳ ಅನುದಾನ ಒದಗಿಸಬೇಕು. ಅಲ್ಲದೆ ಪಠ್ಯಕ್ರಮ ಪರಿಷ್ಕರಣೆಯಲ್ಲಿ ಜೋಗಪ್ಪ ಅವರ ಪಠ್ಯ ಅಳವಡಿಸಬೇಕು ಎಂದು ಮನವಿ ಮಾಡಿದರು.
ಚಂದ್ರಯಾನ ಯಶಸ್ಸು ಯಾರದ್ದು? ದೇಶದ ವಿಜ್ಞಾನಿಗಳು ಚಂದ್ರಯಾನ-೩ ರ ಯಶಸ್ಸಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ. ದೇಶವನ್ನು ವಿಶ್ವ ಮಟ್ಟದಲ್ಲಿ ವಿಜ್ಞಾನಿಗಳು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ, ಆದರೆ ಚಂದ್ರಯಾನ ಯಶಸ್ಸಿನ ಸಮಯದಲ್ಲಿ ತಿರುಪತಿಗೆ ಹೋಗಿ ತಿಮ್ಮಪ್ಪನ ಆಶೀರ್ವಾದ ಪಡೆದುಕೊಂಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಬರುತ್ತದೆ. ಎಲ್ಲೋ ಒಂದು ಕಡೆ ಅನುಮಾನಕ್ಕೆ ದಾರಿ ಮಾಡಿಕೊಡುತ್ತದೆ. ವಿಜ್ಞಾನಿಗಳು ವಿಜ್ಞಾನ ಮತ್ತು ವೈಜ್ಞಾನಿಕತೆ ಮೇಲೆ ನಂಬಿಕೆ ಇಡಬೇಕು. ಅದು ಬಿಟ್ಟು ತಿಮ್ಮಪ್ಪನ ಬಳಿ ಹೋಗಿ ಆಶೀರ್ವಾದ ಪಡೆದಿರುವ ನಡೆಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ರವಿ, ಸಮೀರ ಕರ್ಜಗಿ, ರಂಗನಾಥ ಸುದ್ದಿಗೋಷ್ಠಿಯಲ್ಲಿ ಇದ್ದರು.