ಜಿಲ್ಲೆ

ತೃತೀಯ ಲಿಂಗಿ ಮೇಲೆ ಹಲ್ಲೆ ಮಾಡಿದವರ ಸೆರೆ, ಚಿಕಿತ್ಸೆ ಫಲಿಸದೆ ಅನಿಕಾ ಸಾವು, ಐವರ ಬಂಧನ ಪೊಲೀಸರ ಕಾರ್ಯಕ್ಕೆ ಎಸ್‌ಪಿ ಶ್ಲಾಘನೆ

Bengaluru Rural

ನೆಲಮಂಗಲ: ತಾಲೂಕಿನ ಮಹದೇವಪುರದ ರಾ.ಹೆದ್ದಾರಿ 48ರ ಬಳಿ ತೃತೀಯ ಲಿಂಗಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಮಹದೇವಪುರದ ನಿವಾಸಿ ಅನಿಕಾ (23) ಮೃತೆ. ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯ ಬೋವಿಪಾಳ್ಯದ ನವೀನ್(22), ಮಹದೇವಪುರ ನಂದಗೋಕುಲ ನಗರದಲ್ಲಿ ವಾಸವಿದ್ದ, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೇನೇಶ್ವರದ ನಿವಾಸಿ ಸಂತೋಷ್ (20), ಬೆಂಗಳೂರಿನ ಕಮಲಾನಗರದ ಕಸ್ತೂರಿ ಬಡಾವಣೆ ನಿವಾಸಿ ಮಹೇಶ್ (20), ಹೇರೋಹಳ್ಳಿ ನಿವಾಸಿ ಮಣಿಕಂಠ (21) ಹಾಗೂ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಕನನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ: ಆರೋಪಿಗಳು ಏ.8ರಂದು ರಾತ್ರಿ 10ಗಂಟೆಗೆ ಮಹದೇವಪುರದಿಂದ ಬೆಂಗಳೂರಿನ ಕಮಲಾನಗರಕ್ಕೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಚಾಕೋಲೆಟ್ ್ಯಾಕ್ಟರಿ ಬಳಿ ನಿಂತಿದ್ದ ಅನಿಕಾನೊಂದಿಗೆ ಅಸಭ್ಯವಾಗಿ ವರ್ತಿಸಿ, ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.

ಸ್ಥಳದಲ್ಲಿದ್ದ ಸ್ನೇಹಿತರು, ಅನಿಕಾಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಏ.9ರಂದು ಮೃತಪಟ್ಟಿದ್ದರು.

ಸುಳಿವು ನೀಡಿದ ಸಿಸಿಟಿವಿ, ಮೊಬೈಲ್‌ನೆಟ್‌ವರ್ಕ್: ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಪೊಲೀಸರು, ನಗರದ ವಿವಿಧೆಡೆ ಸಿಸಿಟಿವಿ ಕ್ಯಾಮರಾ, ಸುಮಾರು 3 ಸಾವಿರಕ್ಕೂ ಹೆಚ್ಚು ಮೊಬೈಲ್ ನೆಟ್‌ವರ್ಕ್ ಪರೀಕ್ಷಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಏ.28ರಂದು ಸಂಜೆ ಬೆಂಗಳೂರಿನಲ್ಲಿ 3 ಮಂದಿ ಹಾಗೂ ಮಹದೇವಪುರ ನಂದಗೋಕುಲನಗರದ ಬಳಿ ಇಬ್ಬರನ್ನು ಬಂಧಿಸಿದ್ದಾರೆ ಎಂದು ಗ್ರಾಮಾಂತರ ಠಾಣೆ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ ತಿಳಿಸಿದರು.

ವಿವಿಧ ಪ್ರಕರಣದಲ್ಲಿ ಭಾಗಿ: ಪ್ರಕರಣ ಪ್ರಮುಖ ಆರೋಪಿ ನವೀನ್ ಮಂಡ್ಯ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಪೋಕ್ಸೋ, ಕೊಲೆ, ಕೊಲೆಯತ್ನ, ಕಳ್ಳತನ, ದರೋಡೆ ಸೇರಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ರೌಡಿ ಶೀಟರ್ ತೆರೆಯಲು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

ನಗದು ಬಹುಮಾನ: ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಇನ್‌ಸ್ಪೆಕ್ಟರ್ ಪಿ.ರಾಜೀವ್ ನೇತೃತ್ವದ ಗ್ರಾಮಾಂತರ ಠಾಣೆ ಎಸ್‌ಐ ಈರಮ್ಮ, ದಾಬಸ್‌ಪೇಟೆ ಪಿಎಸ್‌ಐ ಮುರಳಿ, ಸಿಬ್ಬಂದಿ ಬಾಲಾಜಿಸಿಂಗ್, ಗಂಗಾಧರ್, ಶಿವಶಂಕರ್, ೈರೋಜ್, ರಂಗನಾಥ್, ರಘು, ಇಮ್ರಾನ್‌ಖಾನ್, ಮಧುಕುಮಾರ್, ಸುನಿಲ್‌ಕುಮಾರ್, ರವಿಕುಮಾರ್, ಲಕ್ಷ್ಮಪ್ಪ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಗದು ಬಹುಮಾನ ನೀಡಿದರು.

ವ್ಹೀಲಿಂಗ್ ಬೈಕ್ ವಶ: ನೆಲಮಂಗಲ ಉಪವಿಭಾಗ ಹಾಗೂ ಹೊಸಕೋಟೆ ಉಪವಿಭಾಗ ವ್ಯಾಪ್ತಿಯಲ್ಲಿ ಏ.28ರಂದು ರಾತ್ರಿ ರಾ.ಹೆದ್ದಾರಿ ಹಾಗೂ ವಿವಿಧ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡರು ಹಾಗೂ ಹಲವು ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ. ನೆಲಮಂಗಲ ವ್ಯಾಪ್ತಿಯ ಡಿವೈಎಸ್‌ಪಿ ಗೌತಮ್ ಮಾರ್ಗದರ್ಶನದಲ್ಲಿ ತ್ಯಾಮಗೊಂಡ್ಲು ಠಾಣೆ ಎಸ್‌ಐ ಚಿಕ್ಕನರಸಿಂಹಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ವೀಲಿಂಗ್ ಮಾಡುತ್ತಿದ್ದ 25 ಬೈಕ್, ನಂಬರ್ ಪ್ಲೇಟ್ ಇಲ್ಲದ 5 ವಾಹನ ಹಾಗೂ ಅತಿವೇಗವಾಗಿ ಸಂಚಾರ ಮಾಡುತ್ತಿದ್ದ 1 ಆಟೋರಿಕ್ಷಾ ವಶಪಡಿಸಿಕೊಂಡಿದ್ದಾರೆ. ಹೊಸಕೋಟೆ ಉಪವಿಭಾಗ ವ್ಯಾಪ್ತಿಯ ಡಿವೈಎಸ್‌ಪಿ ಎಂ.ಎಚ್.ಉಮಾಶಂಕರ್ ನೇತೃತ್ವದಲ್ಲಿ ಸುಮಾರು 17 ದ್ವಿಚಕ್ರವಾಹನ ಹಾಗೂ 3 ಆಟೋರಿಕ್ಷಾ ವಶಪಡಿಸಿಕೊಳ್ಳಲಾಗಿದೆ ಎಂದು ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾಹಿತಿ ನೀಡಿದರು.

ಸಂಚಾರಿ ಇನ್‌ಸ್ಪೆಕ್ಟರ್ ಶಿವಕುಮಾರ್, ವೃತ್ತ ನಿರೀಕ್ಷಕ ಪಿ.ರಾಜೀವ್, ಎ.ವಿ.ಕುಮಾರ್, ನಗರಠಾಣೆ ಎಸ್‌ಐ ಎನ್.ಸುರೇಶ್ ಮತ್ತಿತರರು ಉಪಸ್ಥಿತರಿದರು.