ಮೈಸೂರು: 14 ಆನೆಗಳಲ್ಲಿ ಕಿರಿಯ ಗಂಡಾನೆ ಭೀಮನ ತೂಕದಲ್ಲಿ 440 ಕೆ.ಜಿ. ಹೆಚ್ಚಿಸಿಕೊಳ್ಳುವ ಮೂಲಕ ಅಧಿಕ ತೂಕವುಳ್ಳ ಆನೆ ಎನಿಸಿಕೊಂಡಿದೆ. 2ನೇ ಸ್ಥಾನದಲ್ಲಿ ಸುಗ್ರೀವ, 3ನೇ ಸ್ಥಾನದಲ್ಲಿ ಶ್ರೀಕಂಠ ಆನೆ ಇದೆ.
14 ಆನೆಗಳಿಗೆ ವಿಶೇಷ ಆಹಾರ ನೀಡಿ ಆರೈಕೆ ಮಾಡಲಾಗುತ್ತಿತ್ತು. ಆ.4ರಂದು ಮೊದಲ ತಂಡದಲ್ಲಿ ನಗರಕ್ಕೆ ಆಗಮಿಸಿದ್ದ 9 ಆನೆಗಳಿಗೆ ಆ.12ರಿಂದ ವಿಶೇಷ ಪೌಷ್ಟಿಕ ಆಹಾರ ನೀಡಲಾಗಿದೆ.
ಆ.25ರಂದು 2ನೇ ತಂಡದಲ್ಲಿ ಆಗಮಿಸಿದ್ದ 5 ಆನೆಗಳಿಗೆ ಆ.26ರಿಂದ ವಿಶೇಷ ಆಹಾರ ನೀಡಿ ಆರೈಕೆ ಮಾಡಲಾಗಿದೆ. ಮೊದಲ ತಂಡದ ಆನೆಗಳಿಗೆ 45 ದಿನ, 2ನೇ ತಂಡದ ಆನೆಗಳಿಗೆ 35 ದಿನ ವಿಶೇಷ ಆಹಾರ ನೀಡಿ ಉಪಚರಿಸಲಾಗಿದೆ. ದಸರಾ ಮುಗಿಸಿ ಸ್ವಸ್ಥಾನಕ್ಕೆ ಮರಳುವ ಮುನ್ನ ಸಂಪ್ರದಾಯದಂತೆ ಗಜಪಡೆಗೆ ತೂಕ ಪರೀಕ್ಷೆ ಮಾಡಿಸಲಾಗಿದ್ದು, ಅದರಲ್ಲಿ ಭೀಮ ಹೆಚ್ಚಿನ ತೂಕವುಳ್ಳ ಆನೆಯಾಗಿ ಹೊರಹೊಮ್ಮಿದೆ.
ಭೀಮ 5905(ಬಂದಾಗ 5465) ಕೆಜಿ ತೂಕದಿಂದ ಮೊದಲ ಸ್ಥಾನ ಪಡೆದಿದ್ದ. ಎರಡನೇ ತಂಡದಲ್ಲಿ ಬಂದಿದ್ದ ಸುಗ್ರೀವ 350 ಕೆಜಿ ತೂಕ ಹೆಚ್ಚಿಸಿಕೊಂಡು 5895(5545) ಕೆಜಿ ತೂಗುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾನೆ. ಪಟ್ಟದ ಆನೆ ಶ್ರೀಕಂಠ 320 ಕೆಜಿ ತೂಕ ಹೆಚ್ಚಳವಾಗಿ 5860(5540) ಕೆಜಿ ತೂಗಿ 3ನೇ ಸ್ಥಾನ ಪಡೆದಿದ್ದಾನೆ.
ನಿಶಾನೆ ಆನೆ ಏಕಲವ್ಯ 390 ಕೆಜಿ ಹೆಚ್ಚಳವಾಗಿ 5695(5305) ಕೆಜಿ ತೂಕ ಹೊಂದಿದ್ದಾನೆ. ಮಹೇಂದ್ರ ಆನೆಯ ತೂಕದಲ್ಲಿ 245 ಕೆಜಿ ತೂಕ ಹೆಚ್ಚಾಗಿ 5365(5120) ಕೆಜಿ ತೂಗಿದ್ದಾನೆ.
ಧನಂಜಯ ಆನೆ 300 ಕೆಜಿ ತೂಕ ಹೆಚ್ಚಿಸಿಕೊಂಡು 5650(5310) ಕೆಜಿ ತೂಕ, ಕ್ಯಾಪ್ಟನ್ ಅಭಿಮನ್ಯು 275 ಕೆಜಿ ತೂಕ ಹೆಚ್ಚಳವಾಗಿ 5635(5360) ಕೆಜಿ ತೂಕ ಹೊಂದಿದ್ದಾನೆ. ಗೋಪಿ ತೂಕದಲ್ಲಿ 255 ಕೆಜಿ ಹೆಚ್ಚಳವಾಗಿ 5245(4990) ಕೆಜಿ ತೂಕವುಳ್ಳವನಾಗಿದ್ದಾನೆ.
ಕಂಜನ್ ತೂಕದಲ್ಲಿ 345 ಕೆಜಿ ಹೆಚ್ಚಾಗಿದ್ದು, ಇದೀಗ 5225(4880) ಕೆಜಿ ತೂಕ ಹೊಂದಿದ್ದಾನೆ. ಪ್ರಶಾಂತ ಆನೆ ಕೇವಲ 50 ಕೆಜಿ ತೂಕ ಹೆಚ್ಚಳವಾಗಿದ್ದು, 5160(5110) ತೂಕ ಹೊಂದಿದ್ದಾನೆ.