ಮೂಡಿಗೆರೆ ತುಳುಕೂಟದಿಂದ ಆಯೋಜಿಸಿದ್ದ ತುಳು ವೈಭವೋ ಕಾರ್ಯಕ್ರಮವನ್ನು ಮಂಗಳೂರಿನ ವೈದ್ಯೆ ಆಶಾ ಜ್ಯೋತಿ ರೈ ಉದ್ಘಾಟಿಸಿದರು. ಪಿ.ಕೆ.ಹಮೀದ್, ರಫೀಕ್ ಮಾಸ್ಟರ್, ವಂದನೀಯ ಸ್ವಾಮಿ ಮಾರ್ಸೆಲ್ ಪಿಂಟೊ, ಮೋಟಮ್ಮ, ಬಿ.ಬಿ.ನಿಂಗಯ್ಯ, ಡಾ. ರಾಮಚರಣ ಅಡ್ಯಂತಾಯ, ಗೋಪಾಲ ಶೆಟ್ಟಿ, ಟಿ.ಹರೀಶ್, ಸುರೇಶ್ ಶೆಟ್ಟಿ, ಹಸೈನಾರ್ ಇತರರಿದ್ದರು. 
ಜಿಲ್ಲೆ

ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸಿ

ಮೂಡಿಗೆರೆ: ತುಳು, ಬ್ಯಾರಿ, ಕೊಂಕಣಿ ಭಾಷೆಗಳು ಒಂದೇ ತಾಯಿಯ ಮಕ್ಕಳ ಸ್ಥಾನ ಪಡೆದುಕೊಂಡಿವೆ. ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಭಾಷೆಗಳು ಪ್ರತಿ ಮನೆಯ ಆಡು ಭಾಷೆಗಳಾಗಿವೆ ಎಂದು ಮಂಗಳೂರಿನ ಸಾಹಿತಿ, ವಾಗ್ಮಿ ಮಹಮ್ಮದ್ ರಫೀಕ್ ಮಾಸ್ಟರ್ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮೂಡಿಗೆರೆ ತುಳುಕೂಟದಿಂದ ಶುಕ್ರವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ತುಳುವೈಭವೋ ಕಾರ್ಯಕ್ರಮದಲ್ಲಿ ಮಾತನಾಡಿ, ಕಡಲ ತಡಿಯಿಂದ ಹೊರಟಿರುವ ತುಳು ಭಾಷೆ ರಾಜ್ಯ, ದೇಶ, ವಿದೇಶದಲ್ಲಿ ಭದ್ರವಾಗಿ ನೆಲೆಯೂರಿದೆ. ಈ ಭಾಷೆಯನ್ನು ರಾಜ್ಯಾಂಗದ ಭಾಷೆಯನ್ನಾಗಿ ಮಾಡಬೇಕೆಂದು ಹಾಗೂ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ತುಳುನಾಡಿನಿಂದ ಹೊರಟ ಕೂಗು ಇನ್ನೂ ಶಾಸನ ಸಭೆಗೆ ತಲುಪದಿರುವುದು ವಿಪರ್ಯಾಸ. ಕನ್ನಡಕ್ಕೆ ಮೊದಲನೇ ಸ್ಥಾನ ನೀಡಿ, ತುಳು ಭಾಷೆಗೆ ಎರಡನೇ ಸ್ಥಾನ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.

ದ್ರಾವಿಡ ಭಾಷೆಗಳ ಸಾಲಿನಲ್ಲಿ ತುಳು ಸೇರಿದಂತೆ ಅನೇಕ ಭಾಷೆಗಳು ಸ್ಥಾಪಿತಗೊಂಡು ಸಾವಿರಾರು ವರ್ಷಗಳು ಸಂದಿವೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಶತಮಾನದ ಹಿಂದೆ ಕಾಲಿಟ್ಟಿದ್ದು ಈಗ ಬಹುತೇಕರು ಮಂಗಳೂರಿಗರಂತೆ ತುಳುವಿನಲ್ಲಿ ಮಾತನಾಡುವುದನ್ನು ರೂಢಿಮಾಡಿಕೊಂಡಿದ್ದಾರೆ. ತುಳು ಭಾಷೆಯ ಸಂಸ್ಕೃತಿ, ವೈವಿಧ್ಯತೆ ಮತ್ತು ಪರಂಪರೆ, ಇತಿಹಾಸವನ್ನು ನೆನಪಿಸುವಂತಿದೆ. ತುಳು ಸಂಸ್ಕೃತಿಯ ಖಾದ್ಯವನ್ನು ಸವಿಯದವರೇ ಇಲ್ಲ. ಅತ್ಯುತ್ತಮವಾದ ಖಾದ್ಯ ತಯಾರಿಕೆಯಲ್ಲಿ ತುಳುಭಾಷಿಕರು ಮುಂಚೂಣಿಯಲ್ಲಿದ್ದಾರೆ. ತುಳು ಭಾಷೆಯ ಸಾಹಿತ್ಯ, ಸಂಸ್ಕೃತಿ, ಯಕ್ಷಗಾನ ಸೇರಿದಂತೆ ಅನೇಕ ಕಲೆ, ಸಾಹಿತ್ಯ ಎಲ್ಲ ವರ್ಗದವರನ್ನೂ ಆಕರ್ಷಿಸುವಂತಿದೆ ಎಂದು ತಿಳಿಸಿದರು.

ತುಳು ಭಾಷೆ ಮಂಗಳೂರು, ಉಡುಪಿ, ಕಾಸರಗೋಡು, ಚಿಕ್ಕಮಗಳೂರು ಸೇರಿದಂತೆ ಪ್ರಾಂತ್ಯವಾರು ವಿಭಾಗಗಳಲ್ಲಿ ಬೇರೆ ಬೇರೆ ರೀತಿಯ ಆಡುಭಾಷೆಯಾಗಿದೆ. ಈಗಿನ ಯುವ ಜನಾಂಗ ಆಧುನಿಕತೆಗೆ ತಿರುಗಿದ ನಂತರ ಹಳೆಯ ಸಂಸ್ಕೃತಿ, ಪರಂಪರೆ ಮರೆತಿದೆ. ಮೊಬೈಲ್. ಕಂಪ್ಯೂಟರ್‌ನತ್ತ ಆಕರ್ಷಿತವಾಗಿ ತುಳುನಾಡಿನ ಧಾರ್ಮಿಕ ಸಂಸ್ಕೃತಿಯ ಮೂಲ ಸ್ವರೂಪಕ್ಕೆ ಧಕ್ಕೆ ತರುವಂತಾಗಿದೆ. ಅಂತರ್ಜಾತಿ ವಿವಾಹವಾದರೆ ಮೈ ಪರಚಿಕೊಳ್ಳುವವರು, ಡ್ರಗ್ಸ್‌ನಂತಹ ಮಾರಕ ಪದಾರ್ಥಕ್ಕೆ ಬಲಿಯಾದವರನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಇದರಿಂದ ಸಮಾಜ ಕಲಷಿತವಾಗುತ್ತಿದೆ. ಸಂಜೆಯಿಂದ ಮರುದಿನ ಬೆಳಗ್ಗೆವರೆಗೆ ನಡೆಯುತ್ತಿದ್ದ ಯಕ್ಷಗಾನ ಈಗ 2 ಅಥವಾ 3 ಗಂಟೆಗೆ ಸೀಮಿತವಾಗಿದೆ. ಆಧುನಿಕತೆಯ ಭರಾಟೆಯಿಂದ ತುಳುನಾಡಿನ ಕಲೆ ಮತ್ತು ಸಾಹಿತ್ಯಕ್ಕೆ ಕೊಡಲಿ ಪೆಟ್ಟುಬಿದ್ದಂತಾಗಿದೆ ಎಂದು ಮಂಗಳೂರಿನ ವೈದ್ಯೆ ಡಾ. ಆಶಾ ಜ್ಯೋತಿ ರೈ ತಿಳಿಸಿದರು.

ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ತುಳುಕೂಟದ ಅಧ್ಯಕ್ಷ ಪಿ.ಕೆ.ಹಮೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಕ್ರೈಸ್ತ ಧರ್ಮಗುರು ವಂದನೀಯ ಸ್ವಾಮಿ ಮಾರ್ಸೆಲ್ ಪಿಂಟೋ, ಡಾ. ರಾಮಚರಣ ಅಡ್ಯಂತಾಯ, ಗೋಪಾಲ ಶೆಟ್ಟಿ, ಜಾಣಪ್ಪ ಮಾಸ್ಟರ್, ಟಿ.ಹರೀಶ್, ಯೋಗೇಶ್ ಪೂಜಾರಿ, ಸುಂದರೇಶ್ ಮಾಸ್ಟರ್, ಸುರೇಶ್ ಶೆಟ್ಟಿ, ಹಸೈನಾರ್, ದೀಪಕ್ ದೊಡ್ಡಯ್ಯ ಇತರರಿದ್ದರು.