ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮದಲ್ಲಿ ಮಂಗಳವಾರ ಸಂಜೆ ಕನ್ನಂಬಾಡಮ್ಮನ ಹಬ್ಬದಲ್ಲಿ ಭಕ್ತರು ದೇವಿ ಪೂಜಿಸಲು ಸಂಭ್ರಮದಿಂದ ಭಾಗವಹಿಸಿದ್ದರು. 
ಜಿಲ್ಲೆ

ತುಳಸಿಯಲ್ಲಿ ಕನ್ನಂಬಾಡಮ್ಮನವರ ಹಬ್ಬ

ಕಿಕ್ಕೇರಿ: ರೈತಾಪಿ ಜನರ ಬಲುದೊಡ್ಡ ಹಬ್ಬ ಎನಿಸಿರುವ ಕನ್ನಂಬಾಡಮ್ಮನವರ ಹಬ್ಬ ವಿಜೃಂಭಣೆಯಿಂದ ಹೋಬಳಿಯ ತುಳಸಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆಯಿತು.

ಮಹಿಳೆಯರು ತಂಬಿಟ್ಟಿನ ರಾಗಿದೀವಿಗೆಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿಕೊಂಡು ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಹಲವರು ಕಳಸ ಹೊತ್ತು ದೇವಿಗೆ ಜೈಕಾರ ಹಾಕಿದರು. ಪಂಜು ಹಿಡಿದು ಕೊಂಡು ದಾರಿಯುದ್ದಕ್ಕೂ ಆರತಿ ಎತ್ತಿದರು. ತಮಟೆ ವಾದ್ಯದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಯುವಕರು, ಮಕ್ಕಳು ದೇವಿಗೆ ಜೈಕಾರ ಹಾಕುತ್ತ ಸಾಗಿದರು.

ತಮಟೆ ವಾದ್ಯದೊಂದಿಗೆ ದಾರಿಯಲ್ಲಿ ಭಕ್ತರು ಸಾಗುತ್ತಿದ್ದಾಗ ಮಕ್ಕಳು ಜೊತೆಯಲ್ಲಿ ಹಿಂಬಾಲಿಸಿದರು. ನಂತರ ಗಂಗಸ್ಥಳಕ್ಕೆ ಜಮಾಯಿಸಿದರು. ದೇವಿಗೆ ಪೂಜಿಸಿ ತಂಬಿಟ್ಟು, ಪೂಜಾ ಸಾಮಗ್ರಿಗಳಿಂದ ಪೂಜಿಸಿದರು.

ಕೋಳಿ, ಕುರಿ ಬಲಿ ನೀಡಿ ದೇವಿಗೆ ಹರಕೆ ಒಪ್ಪಿಸಿದರು. ಗ್ರಾಮದಲ್ಲಿರುವ ಮಾರಮ್ಮ, ಮಾಸ್ತಮ್ಮ ಮತ್ತಿತರ ದೇವರಿಗೆ ಪೂಜಿಸಿ ಗ್ರಾಮಕ್ಕೆ ದುಷ್ಟ ಶಕ್ತಿ ನುಸುಳದಂತೆ, ರೋಗರುಜಿನಗಳು ಕಾಡದಂತೆ ರಕ್ಷಿಸಲು ಸಾಮೂಹಿಕವಾಗಿ ಪ್ರಾರ್ಥಿಸಿದರು.

ಹಬ್ಬಕ್ಕೂ ಮುನ್ನ ಗ್ರಾಮದ ಪ್ರಮುಖರು ಸಾಂಪ್ರದಾಯಿಕ ಪದ್ಧತಿಯಂತೆ ಕನ್ನಂಬಾಡಿಯಲ್ಲಿರುವ ಕನ್ನಂಬಾಡಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಹಬ್ಬ ಆಚರಣೆಗೆ ಚಾಲನೆ ನೀಡಿದರು.


ಸುತ್ತಮುತ್ತಲ ಗ್ರಾಮಸ್ಥರು, ನೆಂಟರಿಷ್ಟರು ಹಬ್ಬದಲ್ಲಿ ಭಾಗವಹಿಸಿ ಅತಿಥ್ಯ ಸ್ವೀಕಾರ ಮಾಡಿದರು.