ಜಿಲ್ಲೆ

ತುಳಜಾಭವಾನಿ ದೇವಸ್ಥಾನ ಸೀಲ್​ಡೌನ್

ಕಾರವಾರ: ಜಿಲ್ಲೆಯ 125 ಜನರಲ್ಲಿ ಬುಧವಾರ ಕರೊನಾ ಕಾಣಿಸಿಕೊಂಡಿದ್ದು, 78 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.

ಕಾರವಾರದಲ್ಲಿ 30, ಭಟ್ಕಳ ಹಾಗೂ ಅಂಕೋಲಾದಲ್ಲಿ ತಲಾ 10, ಕುಮಟಾದಲ್ಲಿ 17, ಶಿರಸಿ, ಸಿದ್ದಾಪುರ, ಜೊಯಿಡಾದಲ್ಲಿ ತಲಾ 1, ದಾಂಡೇಲಿ ಹಾಗೂ ಹಳಿಯಾಳ ಸೇರಿ 33, ಮುಂಡಗೋಡಿನಲ್ಲಿ 16, ಹೊನ್ನಾವರ ಹಾಗೂ ಯಲ್ಲಾಪುರದಲ್ಲಿ ತಲಾ 3 ಜನರಲ್ಲಿ ಕೋವಿಡ್ - 19 ಖಚಿತವಾಗಿದೆ.

ಕಾರವಾರದಲ್ಲಿ 5, ಅಂಕೋಲಾದಲ್ಲಿ 12, ಕುಮಟಾದಲ್ಲಿ 3, ಶಿರಸಿಯಲ್ಲಿ 9, ಮುಂಡಗೋಡಿನಲ್ಲಿ 25, ಹಳಿಯಾಳದಲ್ಲಿ 24 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.

ಕಾರವಾರ ಕ್ರಿಮ್ಸ್​ನಲ್ಲಿ ಒಬ್ಬ ಸೋಂಕಿತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ಕಳಿಸಲಾಗಿದೆ. 90 ವರ್ಷದ ವೃದ್ಧ ಸೇರಿ ಏಳು ಜನ ವಿವಿಧ ಬೇರೆ ರೋಗಗಳಿಂದ ಬಳಲುತ್ತಿರುವವರು ಕ್ರಿಮ್್ಸ ಆಸ್ಪತ್ರೆಯಲ್ಲಿ ವೆಂಟಿಲೇಶನ್​ನಲ್ಲಿದ್ದಾರೆ.

ಒಟ್ಟಾರೆ ಸೋಂಕಿತರಲ್ಲಿ ಏಳು ಜನ ಮಕ್ಕಳು, 4 ವೃದ್ಧರು ಇದ್ದಾರೆ. 22 ಜನರಿಗೆ ಜ್ವರದ ಲಕ್ಷಣ (ಐಎಲ್​ಐ) ಇದ್ದು, ಹೊರ ಊರುಗಳಿಂದ ಬಂದ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 32 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ.

ಸೀಬರ್ಡ್​ನಲ್ಲಿ ಸೋಂಕಿನ ಸರಣಿ: ಕಾರವಾರದ ಸೀಬರ್ಡ್ ನೌಕಾ ಯೋಜನಾ ವ್ಯಾಪ್ತಿಯಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದ 26 ಜನರಲ್ಲಿ ಕರೊನಾ ಪತ್ತೆಯಾಗಿದೆ. ಇನ್ನು ನಗರರ ಇಬ್ಬರು ಗ್ರಾಮೀಣ ಭಾಗದ ಇಬ್ಬರಲ್ಲಿ ಸೋಂಕು ಖಚಿತವಾಗಿದೆ.

ದೇವಸ್ಥಾನ ಬಂದ್: ಶಾಸಕ ಆರ್.ವಿ.ದೇಶಪಾಂಡೆ ಅವರ ಟ್ರಸ್ಟ್ ಆಡಳಿತಕ್ಕೆ ಒಳಪಟ್ಟಿರುವ ಹಳಿಯಾಳ ಪಟ್ಟಣದ ತುಳಜಾಭವಾನಿ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ಮಂಗಳವಾರ ಸಂಜೆಯಿಂದ ಬಂದ್ ಮಾಡಲಾಗಿದೆ. ದೇವಸ್ಥಾನದ ಅರ್ಚಕರಲ್ಲಿ ಸೋಂಕು ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಗಿದೆ. ದೇವಸ್ಥಾನಕ್ಕೆ ತೆರಳುವ ಮಾರ್ಗವನ್ನು ಸೀಲ್​ಡೌನ್ ಮಾಡಲಾಗಿದೆ.