ಜಿಲ್ಲೆ

ತುರ್ತು ಪರಿಸ್ಥಿತಿ ನಿರ್ವಹಣೆ ಕುರಿತು ಅರಿವು ಅಗತ್ಯ

ಚಿತ್ರದುರ್ಗ: ತುರ್ತು ಸಂದರ್ಭದಲ್ಲಿ ಸಾರ್ವಜನಿಕರನ್ನು ರಕ್ಷಣೆ ಮಾಡುವ ಕುರಿತಂತೆ ಆಪರೇಷನ್ ಅಭ್ಯಾಸ್ ನಾಗರಿಕ ಸುರಕ್ಷಾ ಅಣಕು ಪ್ರದರ್ಶನ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ನಡೆಯಿತು.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ರೆಡ್‌ಕ್ರಾಸ್ ಸೇರಿ ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಸಹಯೋಗದೊಂದಿಗೆ ಪ್ರದರ್ಶನ ಆಯೋಜಿಸಲಾಗಿತ್ತು.

ಬಾಂಬ್ ಸ್ಫೋಟ, ಅಗ್ನಿ ಅವಘಡದಿಂದಾಗುವ ಅಪಾಯದ ಸನ್ನಿವೇಶವನ್ನು ಮೈದಾನದಲ್ಲಿ ಸೃಷ್ಟಿಸಲಾಗಿತ್ತು. ಬಾಂಬ್ ಸ್ಫೋಟಗೊಂಡ ಕೂಡಲೆ ನೆರೆದಿದ್ದ ಸಾರ್ವಜನಿಕರು, ಅಂಗಡಿ ಮಾಲೀಕರು ಕೆಳಕ್ಕೆ ಬಿದ್ದು ನರಳಾಡುತ್ತಿದ್ದರು. ಬಾಂಬ್ ಸ್ಫೋಟದ ಶಬ್ಧ ಕೇಳಿದೊಡನೆ ಸೈರನ್ ಮೊಳಗಿತು. ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಲಾಯಿತು.

ಶ್ವಾನದಳದೊಂದಿಗೆ ಆಗಮಿಸಿದ ಬಾಂಬ್ ನಿಷ್ಕ್ರೀಯ ದಳ ಪೊಲೀಸ್ ಆ ಪ್ರದೇಶದಲ್ಲಿ ಪರಿಶೀಲನೆ ಆರಂಭಿಸಿತು. ಈ ವೇಳೆ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಆರೋಗ್ಯ ಇಲಾಖೆ, ರೆಡ್‌ಕ್ರಾಸ್ ಸಂಸ್ಥೆಯ ತಂಡದ ಸದಸ್ಯರು ಗಾಯಾಳುಗಳ ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ವೈದ್ಯಕೀಯ ತಂಡ ಸ್ಥಳದಲ್ಲೇ ತುರ್ತು ಚಿಕಿತ್ಸೆ ಆರಂಭಿಸಿತು.

ಪೊಲೀಸ್ ಇಲಾಖೆಯ ವಿಧ್ವಂಸಕ ತಡೆ ರಕ್ಷಣಾ ದಳ ಎಎಸ್‌ಸಿ ತಂಡ ಮತ್ತು ಶ್ವಾನದಳ ತಪಾಸಣೆ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ತಂಡ, ಜಿಲ್ಲಾ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಳ ತಂಡ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ಬೆಂಗಾವಲು ವಾಹನಗಳ ನಿಯೋಜನೆ, ಜೀರೋ ಟ್ರಾಫಿಕ್ ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಿದವು.

ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿ ಸೋಮಶೇಖರ್ ನೇತೃತ್ವದಲ್ಲಿ ಅಗ್ನಿ ಅವಘಡ ಸಂದರ್ಭಗಳಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಬೆಂಕಿ ನಂದಿಸುವ ಬಗೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೈಗೊಳ್ಳುವ ಕಾರ್ಯಾಚರಣೆಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಲಾಯಿತು. ಅಗ್ನಿ ಅವಘಡ ಸಂದರ್ಭದಲ್ಲಿ ತುರ್ತು ಸ್ಪಂದನೆಗೆ 101 ಅಥವಾ 112 ಕ್ಕೆ ಕರೆ ಮಾಡುವಂತೆ ಮನವಿ ಮಾಡಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ತುರ್ತು ಸೇವೆಗಳು, ಇಲಾಖೆಯ ಸ್ಥಳೀಯ ವಿಕೋಪ ಸ್ಪಂದನಾ ತಂಡದ ಸಹಾಯದೊಂದಿಗೆ ತುರ್ತಾಗಿ ಹೇಗೆ ಸ್ಪಂದಿಸಬೇಕೆಂಬುದನ್ನು ಪ್ರಸ್ತುತಪಡಿಸಲಾಯಿತು. ರೆಡ್‌ಕ್ರಾಸ್ ಸಂಸ್ಥೆಯು ಪೊಲೀಸ್ ಸೇರಿ ವಿವಿಧ ಇಲಾಖೆಗಳಿಗೆ ಪ್ರಥಮ ಚಿಕಿತ್ಸಾ ಕಿಟ್ ಹಾಗೂ ಮಾಸ್ಕ್‌ಗಳನ್ನು ವಿತರಿಸಲಾಯಿತು.

ಅಣಕು ಪ್ರದರ್ಶನಕ್ಕೆ ಚಾಲನೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಮತ್ತು ವಿಕೋಪಗಳಿಂದ ಉಂಟಾಗುವ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಕಡಿಮೆ ಸಮಯದಲ್ಲಿ ತುರ್ತಾಗಿ ಸ್ಪಂದನೆ ದೊರಕುವಂತಾಗಲು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ. ತುರ್ತು ಸಂದರ್ಭದಲ್ಲಿ ಜನರು ಗಾಬರಿಯಾಗದೆ, ವಿವೇಚನೆಯಿಂದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಅಣಕು ಪ್ರದರ್ಶನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‌ಪಿ ಪಿ.ಕೆ.ದಿನಕರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಡಿವೈಎಸ್‌ಪಿ ಶ್ರೀನಿವಾಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್. ಬಣಕಾರ್, ಡಿಯುಡಿಸಿ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ಎನ್‌ಸಿಸಿ, ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಶಾಖೆಯ ಅನಂತ ರೆಡ್ಡಿ, ಅರುಣ್‌ಕುಮಾರ್, ಮಹಜರ್ ಉಲ್ಲಾ ಇತರರಿದ್ದರು.