ಮೂಡಿಗೆರೆ: ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ರೋಗಿಗೆ ತುರ್ತು ಚಿಕಿತ್ಸೆ ನೀಡದ ಪರಿಣಾಮ ರೋಗಿ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಗುತ್ತಿ ಗ್ರಾಮದ ಸುಂದರೇಶ್ (31) ಮೃತ ದುರ್ದೈವಿ. ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಸುಂದರೇಶ್ ಅವರಿಗೆ ಹೊಟ್ಟೆ ನೋವು, ಎದೆ ಭಾಗದಲ್ಲಿ ಉರಿ ಕಾಣಿಸಿಕೊಂಡಿದ್ದರಿಂದ ಪತ್ನಿ ರೇಣುಕಾ ಅವರು ಗುತ್ತಿ ಗ್ರಾಮದಿಂದ ಬೆಳಗಿನ ಜಾವ 5 ಗಂಟೆಗೆ ಆಸ್ಪತ್ರೆಗೆ ಕರೆತಂದರು. ಆಗ ರೋಗಿ ನಡೆದಾಡುವ ಸ್ಥಿತಿಯಲ್ಲಿರಲಿಲ್ಲ. ಆಸ್ಪತ್ರೆ ಒಳಗೆ ಹೋಗಲೂ ಆಗದಿದ್ದರಿಂದ ವ್ಹೀಲ್‌ಚೇರ್ ತರಲು ಸಿಬ್ಬಂದಿಗೆ ತಿಳಿಸಿದಾಗ ರೋಗಿಯ ಕುತ್ತಿಗೆ ಪಟ್ಟಿ ಹಿಡಿದು ಆಸ್ಪತ್ರೆಯೊಳಗೆ ತಳ್ಳಿದ್ದಾರೆ. ತುರ್ತು ಚಿಕಿತ್ಸಾ ವಿಭಾಗಕ್ಕೆ ಹೋದಾಗ ಅಲ್ಲಿ ವೆದ್ಯಾಧಿಕಾರಿ ಇರಲಿಲ್ಲ. ಶುಶ್ರೂಷಕಿಯೊಬ್ಬರು ಉಡಾಫೆಯಿಂದ ವರ್ತಿಸುತ್ತ 4 ಮಾತ್ರೆ ಮಾತ್ರ ನೀಡಿದ್ದಾರೆ. ಅದರಲ್ಲಿ ಒಂದು ಮಾತ್ರೆಯನ್ನು ರೋಗಿಗೆ ನುಂಗಿಸಿ ತುರ್ತು ಚಿಕಿತ್ಸಾ ವಿಭಾಗದ ಬೆಡ್‌ನಲ್ಲಿ ಮಲಗಿಸಿದ್ದಾರೆ. ಬೆಳಗ್ಗೆ 10 ವೇಳೆಗೆ ರೋಗಿ ಮೃತಪಟ್ಟರು.
ರೋಗಿ ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ರೋಗಿಯ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ ವೈದ್ಯಾಧಿಕಾರಿ ಮತ್ತು ಉಡಾಫೆಯಿಂದ ವರ್ತಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಮೃತ ದೇಹವನ್ನು ತೆಗೆದುಕೊಂಡು ಹೋಗುವುದಿಲ್ಲವೆಂದು ಪಟ್ಟು ಹಿಡಿದಾಗ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತಕ್ಕೆ ತಲುಪಿದಾಗ, ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಂಡು ಆಸ್ಪತ್ರೆಗೆ ಬಂದೋಬಸ್ತ್ ಕಲ್ಪಿಸಿದರು.
ಪ್ರತಿಭಟನೆಯಲ್ಲಿ ಮೃತನ ಪತ್ನಿ ರೇಣುಕಾ, ಪಪಂ ಸದಸ್ಯ ಪಿ.ಜಿ.ಅನುಕುಮಾರ್, ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಬ್ರಿಜೇಶ್ ಕಡಿದಾಳು, ಪರಮೇಶ್, ಕಿರಣ್, ಪಿ.ಕೆ.ಮಂಜುನಾಥ್, ಮಹೇಶ್ ಉದುಸೆ, ಯು.ಬಿ.ನಾಗೇಶ್, ಪ್ರಭಾಕರ್ ಬಿನ್ನಡಿ, ಬಕ್ಕಿ ರವಿ, ಶಿವಪ್ರಸಾದ್, ರುದ್ರಯ್ಯ ಪಾಪು ಇತರರಿದ್ದರು.
ತಹಸೀಲ್ದಾರ್ ರಾಜಶೇಖರ್‌ಮೂರ್ತಿ ಆಸ್ಪತ್ರೆಗೆ ಧಾವಿಸಿ ಮೃತನ ಕುಟುಂಬಸ್ಥರು ಮತ್ತು ಸಾರ್ವಜನಿಕರ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಬೇಕು. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರೆ ವೈದ್ಯರ ಪರವಾಗಿ ವರದಿ ನೀಡುವ ಸಾಧ್ಯತೆಯಿದೆ. ಹಾಗಾಗಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಪಟ್ಟುಹಿಡಿದರು. ಪ್ರತಿಭಟನಾಕಾರರನ್ನು ಆಸ್ಪತ್ರೆ ಸಭಾಂಗಣಕ್ಕೆ ಕರೆದುಕೊಂಡು ಹೋದ ತಹಸೀಲ್ದಾರ್ ರಾಜಶೇಖರ್‌ಮೂರ್ತಿ ಅವರು, ರೋಗಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ ತೋರಿದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಕೂಡಲೆ ಎಲ್ಲ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸಭೆ ನಡೆಸಿದರು. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ದೋಷವಾಗದಂತೆ ಕಟ್ಟೆಚ್ಚರ ವಹಿಸಬೇಕೆಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಪ್ರಿಯಾಂಕಾ ಅವರಿಗೆ ಸೂಚಿಸಿದರು. ಸಿಬ್ಬಂದಿಯೊಬ್ಬ ರೋಗಿಯನ್ನು ತಳ್ಳಿದ್ದು, ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಇವೆಲ್ಲವೂ ಆಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಿಸಿಟಿವಿ ಫೂಟೇಜ್ ಪರಿಶೀಲಿಸಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಹಸೀಲ್ದಾರ್ ರಾಜಶೇಖರ್‌ಮೂರ್ತಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಿದರು.
ಮೃತ ದೇಹವನ್ನು ಬಿಟ್ಟುಕೊಡಿ ಮನೆಗೆ ಕೊಂಡೊಯ್ಯುತ್ತೇವೆ ಎಂದು ಕುಟುಂಬಸ್ಥರು ಕೇಳಿಕೊಂಡಾಗ, ಮರಣೋತ್ತರ ಪರೀಕ್ಷೆ ನಡೆಸಿದರೆ ಸಾವಿನ ಕಾರಣ ತಿಳಿಯುತ್ತದೆ. ಜತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿವಾರವೂ ದೊರಕುತ್ತದೆ ಎಂದು ಮನವರಿಕೆ ಮಾಡಿದಾಗ ಮೃತನ ಪತ್ನಿ ರೇಣುಕಾ ಅವರು ಮರಣೋತ್ತರ ಪರೀಕ್ಷೆ ನಡೆಸುವುದು ಬೇಡ. ಹಾಗೆಯೆ ಮೃತದೇಹ ಬಿಟ್ಟುಕೊಡಿ ಎಂದು ಮನವಿ ಮಾಡಿದಾಗ ಆಸ್ಪತ್ರೆ ಆಂಬುಲೆನ್ಸ್‌ನಲ್ಲಿ ಮೃತದೇಹವನ್ನು ಕಳಿಸಿಕೊಡಲಾಯಿತು.
ಆಸ್ಪತ್ರೆಗೆ ಧಾವಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ಥ್ ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ. ಹರೀಶ್ ಬಾಬು ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಭೆ ನಡೆಸಿದರು. ಚಿಕಿತ್ಸೆಯಲ್ಲಿ ದೋಷವಾಗದಂತೆ ಕಟ್ಟೆಚ್ಚರ ವಹಿಸಬೇಕೆಂದು ಎಚ್ಚರಿಕೆ ನೀಡಿದರು.
ನನಗೆ ಒಂದು ಗಂಡು ಮತ್ತು ಹೆಣ್ಣು ಪುಟ್ಟ ಮಕ್ಕಳಿದ್ದಾರೆ. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೆವು. ನನ್ನ ಪತಿಗೆ ಹೊಟ್ಟೆ ನೋವು, ಎದೆ ಭಾಗದಲ್ಲಿ ಉರಿ ಕಾಣಿಸಿಕೊಂಡಾಗ ಆಸ್ಪತ್ರೆಗೆ ಕರೆದುಕೊಂಡುಬಂದೆ. ಆಸ್ಪತ್ರೆಯ ಒಳಗೆ ಹೋಗಲು ನನ್ನ ಪತಿಗೆ ಸಾಧ್ಯವಾಗಲಿಲ್ಲ. ವ್ಹೀಲ್‌ಚೇರ್ ತರಲು ಸಿಬ್ಬಂದಿ ಬಳಿ ಕೇಳಿಕೊಂಡಾಗ ತರಲಿಲ್ಲ. ನನ್ನ ಪತಿಯ ಕುತ್ತಿಗೆಪಟ್ಟಿ ಹಿಡಿದು ಆಸ್ಪತ್ರೆಯ ಒಳಗೆ ದೂಡಿದರು. ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಇರಲಿಲ್ಲ. ದಾದಿಯೊಬ್ಬರು ಉಡಾಫೆಯಿಂದ ವರ್ತಿಸುತ್ತ 4 ಮಾತ್ರೆ ನೀಡಿ ಒಂದನ್ನು ನನ್ನ ಪತಿಗೆ ನುಂಗಿಸಿದರು. ಬೆಳಗ್ಗೆ 10 ಗಂಟೆಯವರೆಗೆ ವೈದ್ಯರಾಗಲಿ ಅಥವಾ ಸಿಬ್ಬಂದಿಯಾಗಲಿ ಬರಲಿಲ್ಲ. ಅಷ್ಟರಲ್ಲಿ ಪತಿ ಮೃತಪಟ್ಟಿದ್ದರು. ನನಗೂ ಆರೋಗ್ಯ ಸರಿಯಿಲ್ಲ. ನಾವು ಬೀದಿಗೆ ಬಿದ್ದಿದ್ದೇವೆ ಎಂದು ರೇಣುಕಾ ಅಳಲು ತೋಡಿಕೊಂಡರು.