ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಮತ್ತು ದಬ್ಬೇಘಟ್ಟ ಹೋಬಳಿಗಳಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಮಾಯಸಂದ್ರ ಗ್ರಾಮದ ಜನತಾ ಕಾಲೋನಿಯ ನಿವಾಸಿ ನಿವೃತ್ತ ಸೈನಿಕ ಶಿವಣ್ಣನವರ ಕುಟುಂಬದವರು ನೆಂಟರ ಮನೆಗೆ ತೆರಳಿದ್ದ ವೇಳೆ ಕಳ್ಳರು ಮನೆಯ ಬೀಗ ಮುರಿದು ಬೀರುವಿನಲ್ಲಿದ್ದ 1 ಲಕ್ಷ ರೂಪಾಯಿಗಳ ನಗದು ಮತ್ತು 25 ಗ್ರಾಂ ಆಭರಣಗಳ ಕಳವು ಮಾಡಿ ಪರಾರಿಯಾಗಿದ್ದಾರೆ.
ದಬ್ಬೇಘಟ್ಟ ಹೋಬಳಿಯ ಮಾವಿನಕೆರೆ ಗ್ರಾಮದ ಮಂಜುನಾಥ್ ಅವರ ಮನೆಯ ಪಕ್ಕದ ಶೆಡ್ಡಿನಲ್ಲಿ ನಿಲ್ಲಿಸಿದ್ದ 2 ಬೈಕ್ ಗಳನ್ನು ಕಳ್ಳರು ಕದ್ದು ಪರಾರಿಯಾಗುವಾಗ ಒಂದು ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿರುವ ಕಾರಣ ಊರ ಹೊರಗಿನ ರಸ್ತೆಯಲ್ಲಿ ನಿಲ್ಲಿಸಿ ಮತ್ತೊಂದು ಬೈಕ್ ತೆಗೆದುಕೊಂಡು ಹೋಗಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವೆರಡು ಘಟನೆಗಳಿಂದ ತಾಲ್ಲೂಕಿನ ಸಾರ್ವಜನಿಕರಲ್ಲಿ ಭಯದ ಆತಂಕ ಹೆಚ್ಚಾಗಿದ್ದು; ಈ ಹಿಂದೆ ಹಲವು ಕಳ್ಳತನವಾಗಿದ್ದರೂ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ವಿಫಲವಾಗಿದ್ದಾರೆಂದು ದೂರಿದ್ದಾರೆ.