ತುಮಕೂರು-: ಜಿಲ್ಲೆಯ ಪ್ರತಿಷ್ಠಿತ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟ(ತುಮುಲ್)ದ ನಿರ್ದೇಶಕ ಸ್ಥಾನಕ್ಕೆ ನಗರದ ಎಂಪ್ರೆಸ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಭಾನುವಾರ ಚುನಾವಣೆ ಶಾಂತಿಯುತವಾಗಿ ನಡೆಯಿತು.
1191 ಮತಗಳ ಪೈಕಿ 1188 ಮತ ಚಲಾವಣೆಯಾದವು, ತುಮಕೂರು ತಾಲೂಕಿನಲ್ಲಿ ಎರಡು, ಗುಬ್ಬಿ 1 ಮತ ಚಲಾವಣೆಯಾಗಲಿಲ್ಲ. ಉಳಿದಂತೆ ಎಲ್ಲ ತಾಲೂಕುಗಳಲ್ಲಿಯೂ ಶೇ.100ರಷ್ಟು ಮತದಾನವಾಯಿತು. ನ್ಯಾಯಾಲಯದ ಆದೇಶದಂತೆ ಅರ್ಹತೆ ಪಡೆದಿದ್ದ 45 ಮತಗಳು ಚಲಾವಣೆಯಾದವು. ತುಮಕೂರು ತಾಲೂಕಿನಲ್ಲಿ 152 ಮತಗಳ ಪೈಕಿ 150, ಗುಬ್ಬಿ ತಾಲೂಕಿನಲ್ಲಿ 121ರ ಪೈಕಿ 120, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 109, ತಿಪಟೂರು 140, ತುರುವೇಕೆರೆ 119, ಕುಣಿಗಲ್ 141, ಮಧುಗಿರಿ 117, ಕೊರಟಗೆರೆ 121, ಶಿರಾ ತಾಲೂಕಿನಲ್ಲಿ 113 ಹಾಗೂ ಪಾವಗಡ ತಾಲೂಕಿನಲ್ಲಿ 52 ಮತಗಳು ಚಲಾವಣೆಯಾದವು.
10 ತಾಲೂಕುಗಳಿಂದ ತಲಾ ಒರ್ವ ನಿರ್ದೇಶಕನಂತೆ 10 ಸ್ಥಾನಗಳಿಗೆ ಇಂದು ಚುನಾವಣೆ ಪ್ರಕ್ರಿಯೆ ನಡೆದಿದ್ದು, ಒಟ್ಟು 21 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಯಿತು. ಚುನಾವಣೆ ಸಂಬಂಧ ಹೈಕೋಟ್ನಲ್ಲಿ ವಿಚಾರಣೆ ನ.26ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಕೋರ್ಟ್ ನಿರ್ದೇಶನದವರೆಗೂ ಎಣಿಕೆಯನ್ನು ತಡೆ ಹಿಡಿಯಲಾಯಿತು. ನಗರದ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಕಾಲೇಜಿನಲ್ಲಿ ಬೆಳಗ್ಗೆ 9ರಿಂದ ಮತದಾನ ಆರಂಭವಾಯಿತು, ಜಿಲ್ಲೆಯೆಲ್ಲೆಡೆಯಿಂದ ಆಗಮಿಸಿದ ಸಹಕಾರಿಗಳು ಪ್ರತಿಷ್ಠಿತ ತುಮುಲ್ ನಿರ್ದೇಶಕ ಸ್ಥಾನಕ್ಕೆ ಸಂಜೆ 4ರ ವರೆಗೂ ಮತದಾನ ಮಾಡಿದರು.
ಎಂಪ್ರೆಸ್ ಕಾಲೇಜಿನ ಆವರಣದಲ್ಲಿ ಪೆಂಡಾಲ್ ಹಾಕಿಕೊಂಡು ಅಭ್ಯರ್ಥಿಗಳ ಪರ ಬೆಂಬಲಿಗರು ಹಾಗೂ ಅಭ್ಯರ್ಥಿಗಳು ತಮಗೆ ಮತ ಹಾಕುವಂತೆ ಮತದಾರರ ಮನವೊವಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಾಲು ಉತ್ಪಾದಕರ ಸಹಕಾರ ಸಂಘಗಳ ಡೆಲಿಗೇಟ್ಗಳು ಪ್ರತ್ಯೇಕ ವಾಹನಗಳಲ್ಲಿ ಮತದಾನಕ್ಕೆ ಆಗಮಿಸಿದರು.
ಡೆಲಿಗೇಟ್ಗಳ ಜತೆಯಲ್ಲಿ ಸಂದ ಸದಸ್ಯರು, ಅಧ್ಯಕ್ಷರು ಕೂಡ ಮತದಾನಕ್ಕೆ ಆಗಮಿಸಿದ್ದರು, ಡೆಲಿಗೇಟ್ಗಳನ್ನು ಮತಕೇಂದ್ರದ ಬಾಗಿಲಿಗೆ ಕರೆದುಕೊಂಡು ತಂದುಬಿಟ್ಟರು. ಕೆಲವು ತಾಲೂಕುಗಳಲ್ಲಿಯೇ ಶನಿವಾರ ರಾತ್ರಿಯೇ ಡೆಲಿಗೇಟ್ಗಳನ್ನು ರಾಜಮರ್ಯಾದೆಯಲ್ಲಿ ನಗರಕ್ಕೆ ಕರೆದುಕೊಂಡು ಬಂದು ಸತ್ಕಾರ ಮಾಡಿದ್ದೂ ಕೆಲವೆಡೆ ಕಾಣಿಸಿತು. ಮತದಾನಕ್ಕೆ ಅವಕಾಶ ಸಿಗದೆ ಅನರ್ಹಗೊಂಡಿದ್ದ 8 ತಾಲೂಕುಗಳ ಡೇರಿಗಳು ಹೈಕೋರ್ಟ್ ಮೆಟ್ಟಿಲೇರಿ ಮತದಾನಕ್ಕೆ ಅವಕಾಶ ಪಡೆದುಕೊಂಡಿರುವುದರಿಂದ ಮತದಾನ ಮಾಡಲು ಹೈಕೋರ್ಟ್ ಆದೇಶದಂತೆ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗಿತ್ತು. ಈ ಮತಗಟ್ಟೆಗಳಲ್ಲಿ 45 ಮತದಾರರು ಮತದಾನ ಮಾಡಿದರು.
ಎಣಿಕೆ ಮುಂದೂಡಿಕೆ!: ಹೈಕೋರ್ಟ್ನಲ್ಲಿ ನ.26ರಂದು ಅನರ್ಹ ಮತದಾರರ ಸಂಬಂಧ ವಿಚಾರಣೆ ನಡೆಯಲಿರುವುದರಿಂದ ಅಂದಿನ ತೀರ್ಪಿನ ಆಧಾರದ ಮೇಲೆ ಮತಗಳ ಎಣಿಕೆ ನಡೆಯಲಿದೆ. ಹಾಗಾಗಿ ಅಲ್ಲಿಯವರೆಗೂ ಮತಪೆಟ್ಟಿಗೆಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಇಡಲಾಗುತ್ತಿದೆ ಎಂದು ಚುನಾವಣಾಧಿಕಾರಿ ಗೌರವಕುಮಾರ್ ಶೆಟ್ಟಿ ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದರು. ಮತ ಹಕ್ಕು ನೀಡುವಲ್ಲಿಯೂ ಸಾಕಷ್ಟು ವಿವಾದ ಮಾಡಿಕೊಂಡಿರುವ ಚುನಾವಣಾಧಿಕಾರಿ ಚುನಾವಣೆ ಪ್ರಕ್ರಿಯೆಯ ಬಗ್ಗೆ ಸರಿಯಾದ ಮಾಹಿತಿ ನೀಡದೆ ಜನರಲ್ಲಿ ಗೊಂದಲಕ್ಕೆ ಕಾರಣವಾದರು. ಮತದಾನದ ದಿನವೇ ಮತ ಎಣಿಕೆ ನಡೆಯಲಿದೆ ಎಂದು ಜಮಾಯಿಸಿದ್ದ ಜನರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು. ಚುನಾವಣೆ ಬಗ್ಗೆ ಸರಿಯಾದ ಮಾಹಿತಿಯನ್ನು ಸಕಾಲದಲ್ಲಿ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.