ತುಮಕೂರು: ಜನಸಾಮಾನ್ಯರ ಸಾರಿಗೆಯೆಂದೇ ಕರೆಯುವ ರೈಲು ಸಾರಿಗೆ ಮತ್ತು ಹೆದ್ದಾರಿ ರಸ್ತೆ ಆಧುನಿಕರಣ ಮಾಡುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ತುಮಕೂರು&ಅರಸೀಕರೆ ಮಾರ್ಗ ವಿದ್ಯುತ್ ಚಾಲಿತ ರೈಲು ಸೇವೆಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಮಕೂರು& ಅರಸೀಕೆರೆ ಮಾರ್ಗದಲ್ಲಿ ಸಾಕಷ್ಟು ರೈಲುಗಳಿದ್ದರೂ ಜನಸಾಮಾನ್ಯರ ಓಡಾಟಕ್ಕೆ ಅನುಕೂಲವಾಗುವಂತಹ ರೈಲಿನ ವ್ಯವಸ್ಥೆಯಿರಲಿಲ್ಲ. ಕೇಂದ್ರ ಸರ್ಕಾರ ಈ ರೈಲ್ವೆ ಮಾರ್ಗವನ್ನು ವಿದ್ಯುದಿಕರಣಗೊಳಿಸಿ ಹೊಸ ಡೆಮು ರೈಲನ್ನು ಸಾಮಾನ್ಯರ ಓಡಾಟಕ್ಕೆ ಒದಗಿಸಿದೆ ಎಂದರು.
ಮೀಟರ್ ಗೇಜ್ ಮತ್ತು ಬ್ರಾಡ್ ಗೇಜ್ ಮಾರ್ಗಗಳ ಕಾಮಗಾರಿಗಳನ್ನು 2018ರಲ್ಲಿ ಪ್ರಾರಂಭಿಸಿ 2022ರಲ್ಲಿ ಉದ್ಘಾಟಿಸುತ್ತಿರುವುದು ಅಭಿವೃದ್ಧಿಯ ವೇಗವನ್ನು ತಿಳಿಸುತ್ತದೆ ಎಂದರು.
ಈ ಹಿಂದೆ ರೈಲು ಅತ್ಯಂತ ವಾಯುಮಾಲಿನ್ಯಕಾರಕ ಸಾರಿಗೆ ಎನ್ನುತ್ತಿದ್ದರು, ಇಂದು ರೈಲ್ವೆ ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸಿ ಮಾಲಿನ್ಯರಹಿತ ಸಾರಿಗೆ ಮಾಡಲಾಗುತ್ತಿದೆ. ರೈಲು ಮತ್ತು ಬಸ್ ನಿಲ್ದಾಣಗಳನ್ನು ಅತ್ಯಂತ ಕೊಳಕು ಪ್ರದೇಶಗಳೆಂಬಂತೆ ಕಾಣುತ್ತಿದ್ದರು. ಇಂದು ವಿದ್ಯುತ್ ದೀಪ, ಕುಡಿಯುವ ನೀರು ಸೇರಿ ಅತ್ಯಾಧುನಿಕ ಸೇವೆಗಳನ್ನು ಕಲ್ಪಿಸಿ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಆಧುನಿಕರಣಗೊಳಿಸಲಾಗುತ್ತಿದೆ ಎಂದರು.
ತುಮಕೂರು, ತಿಪಟೂರು ಅರಸೀಕೆರೆ ಮಾರ್ಗವಾಗಿ ಮತ್ತೊಂದು ಾಸ್ಟ್ ಪ್ಯಾಸೆಂಜರ್ ರೈಲು ಓಡಿಸಲು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಉಪನಗರ ರೈಲು ವ್ಯವಸ್ಥೆಯಿಂದಾಗಿ ತುಮಕೂರು ವೇಗವಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿದೆ. ತುಮಕೂರು&ಅರಸೀಕೆರೆ ರೈಲು ಮಾರ್ಗ ವಿದ್ಯುದ್ದೀಕರಣಗೊಳಿಸಿ ಹೊಸ ಡೆಮು ರೈಲು ನೀಡಿರುವುದರಿಂದ ಈ ಭಾಗದ ಜನಸಾಮಾನ್ಯರ ಕನಸು ಕೈಗೂಡಿದೆ ಎಂದರು.
ಕೇಂದ್ರ ಸರ್ಕಾರ ರೈಲು ಮತ್ತು ರಸ್ತೆಗಳ ಪುನರಾಭಿವೃದ್ಧಿಗೊಳಿಸುವುದು ಮತ್ತು ಮೂಲಸೌಕರ್ಯ ಒದಗಿಸುವುದಕ್ಕಾಗಿ 33 ಸಾವಿರ ಕೋಟಿ ರೂ. ಕಾರ್ಯಯೋಜನೆಯ ಅನುಷ್ಠಾನಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮನ್ ದೀಪ್ ಕಪೂರ್ ಸೇರಿದಂತೆ ಇನ್ನಿತರ ರೈಲ್ವೆ ಅಧಿಕಾರಿಗಳು, ನಾಗರಿಕರು ಇದ್ದರು.
ಆನ್ಲೈನ್ ಲಿಂಕ್ ಮೂಲಕ ಮೋದಿ ಚಾಲನೆ: ಬೆಂಗಳೂರಿನ ಕೆಂಗೇರಿಯ ಕೊಮ್ಮಟ್ಟ ಮೈದಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ರೈಲ್ವೆ ರ್ಟಮಿನಲ್, ಅರಸಿಕೇರೆ&ತುಮಕೂರು (96 ಕಿ.ಮೀ) ಯಲಹಂಕ&ಪೆನುಗೊಂಡ (120ಕಿ.ಮೀ) ಕೊಂಕಣ ರೈಲ್ವೆ ಜಾಲದ (740ಕಿ.ಮೀ) ಶೇ.100 ವಿದ್ಯುದ್ದೀಕರಣಗೊಂಡಿರುವ ಅರಸೀಕೆರೆ, ತುಮಕೂರು, ಯಲಹಂಕದಿಂದ ಪ್ರಯಾಣಿಕರ ರೈಲು ಸೇವೆಗಳು ಹಾಗೂ ರತ್ನಗಿರಿ, ಮಡಗಾಂವ್ ಮತ್ತು ಉಡುಪಿಯಿಂದ ವಿದ್ಯುತ್ ಸೇವೆಗಳಿಗೆ ಆನ್ಲೈನ್ ಲಿಂಕ್ ಮೂಲಕ ಹಸಿರು ನಿಶಾನೆ ತೋರಿಸಿದರು.
ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿದೆ. ಮಳವಳ್ಳಿ& ತುಮಕೂರು ಮಾರ್ಗದ ರೈಲ್ವೆ ಯೋಜನೆಯೂ ಬರಲಿದ್ದು, ತುಮಕೂರು ನಿಲ್ದಾಣವನ್ನು ಆಧುನೀಕರಣಗೊಳಿಸಿ 8 ಪ್ಲಾಟ್ ಫಾರಂಗಳನ್ನಾಗಿ ರೂಪಿಸಬೇಕಿದೆ. ಇದಕ್ಕಾಗಿ ಬೇಕಾಗಿರುವ 8-10 ಹತ್ತು ಎಕರೆ ಭೂಮಿ ಪಡೆದು ಅಭಿವೃದ್ಧಿಗೊಳಿಸಬೇಕು. ಜಿ.ಎಸ್.ಬಸವರಾಜು, ಸಂಸದ