ತುಮಕೂರು: ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿರುವ ತುಮಕೂರು-ಬೆಂಗಳೂರು ನಡುವಿನ ಮಾರ್ಗದಲ್ಲಿ 16 ಬೋಗಿಗಳ ಮೆಮು ರೈಲು (ವಿದ್ಯುತ್ ರೈಲು) ಸಂಚಾರ ಏ.8ರಂದು ಆರಂಭವಾಗಲಿದೆ. ತುಮಕೂರು-ಯಶವಂತಪುರ ನಡುವೆ ಹಾಲಿ 8 ಬೋಗಿಗಳ ಡೆಮುರೈಲು ಸಂಚರಿಸುತ್ತಿದ್ದು, ಪ್ರತಿನಿತ್ಯ ಬೆಂಗಳೂರಿಗೆ ಕೆಲಸಕ್ಕೆ ಹೋಗಿಬರುವ ಸಾವಿರಾರು ಪ್ರಯಾಣಿಕರು ಜನದಟ್ಟಣೆಯಿಂದಾಗಿ ನಿಂತುಕೊಂಡೇ ಪ್ರಯಾಣ ಮಾಡಬೇಕಿತ್ತು. ಹಾಗಾಗಿ, ಈ ರೈಲಿಗೆ ಬದಲಾಗಿ 16 ಬೋಗಿಗಳ ಮೆಮು ರೈಲು ಸಂಚಾರ ಆರಂಭಿಸಲಾಗುತ್ತಿದೆ. ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ನಿಲ್ದಾಣದಿಂದ ತುಮಕೂರಿಗೆ ಹೊಸ ರೈಲು ಬೆಳಗ್ಗೆ 9.30ಕ್ಕೆ ಸಂಚಾರ ಆರಂಭಿಸಲಿದ್ದು, 11ಕ್ಕೆ ತುಮಕೂರು ತಲುಪಲಿದೆ. ಇದೇ ರೈಲು 11.15ಕ್ಕೆ ತುಮಕೂರಿನಿಂದ ಹೊರಟು 1.25ಕ್ಕೆ ಬೆಂಗಳೂರಿನ ಕೆಎಸ್‌ಆರ್ ನಿಲ್ದಾಣ ತಲುಪಲಿದೆ. ಮಧ್ಯಾಹ್ನ 1.50ಕ್ಕೆ ಕೆಎಸ್‌ಆರ್ ನಿಲ್ದಾಣದಿಂದ ಹೊರಟು ಮಧ್ಯಾಹ್ನ 3.20ಕ್ಕೆ ತುಮಕೂರು ತಲುಪಲಿದೆ. ತುಮಕೂರಿನಿಂದ ಮಧ್ಯಾಹ್ನ 3.50ಕ್ಕೆ ಹೊರಟು ಕೆಎಸ್‌ಆರ್ ರೈಲು ನಿಲ್ದಾಣಕ್ಕೆ 5.25ಕ್ಕೆ ತಲುಪಲಿದೆ. ಇದಲ್ಲದೆ, ಅರಸೀಕೆರೆ-ತಿಪಟೂರು-ಬಾಣಸಂದ್ರ-ನಿಟ್ಟೂರು - ಗುಬ್ಬಿ-ತುಮಕೂರು -ಬೆಂಗಳೂರು ನಡುವೆ ಸದ್ಯ ಓಡುತ್ತಿರುವ 8 ಬೋಗಿಗಳ ಡೆಮು ರೈಲು ಬದಲಾಗಿ 16 ಬೋಗಿಗಳ ಐಸಿಎಫ್ ಕೋಚ್‌ಗಳ ಸಾಮಾನ್ಯ ರೈಲು ಸಂಚಾರವೂ ಇದೇ ಏಪ್ರಿಲ್ 8 ರಿಂದ ಪ್ರಾರಂಭಿಸಲಾಗುವುದು. ಇದುವರೆಗೂ ಅರಸೀಕೆರೆಯಿಂದ ಕೆಎಸ್‌ಆರ್‌ವರೆಗೆ ಮಾತ್ರ ಸಂಚರಿಸುತ್ತಿದ್ದ ಈ ರೈಲನ್ನು ರಾಮನಗರದ ಚನ್ನಪಟ್ಟಣದವರೆಗೆ ವಿಸ್ತರಿಸಲಾಗಿದೆ. ಇದರಿಂದ ಉದ್ಯೋಗಕ್ಕಾಗಿ ಕೆಂಗೇರಿ ಕಡೆಗೆ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದೇ ರೈಲು ಸಂಜೆ 4.50ಕ್ಕೆ ಚನ್ನಪಟ್ಟಣದಿಂದ ವಾಪಸಾಗಿ ಅರಸೀಕೆರೆಗೆ ತುಲುಪಲಿದೆ.
ಅರಸೀಕೆರೆ-ತುಮಕೂರು-ಬೆಂಗಳೂರು ನಡುವೆ ಡೆಮು ರೈಲು ಸಂಚರಿಸುತ್ತಿದ್ದುದರಿಂದ ಅತೀವ ದಟ್ಟಣೆಯಿಂದ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಈ ನಿಟ್ಟಿನಲ್ಲಿ ರೈಲ್ವೆ ಸಚಿವರು, ನೈರುತ್ಯ ರೈಲ್ವೆ ಅಧಿಕಾರಿಗಳ ಗಮನಸೆಳೆಯಲಾಗಿತ್ತು. ಈಗ ಡೆಮು ರೈಲು ಬದಲಿಗೆ ಮೆಮು ರೈಲು ಆರಂಭಿಸಿ ಉದ್ಯೋಗಕ್ಕೆ ತೆರಳುವರಿಗೂ, ಸಾಮಾನ್ಯ ನಾಗರಿಕರಿಗೂ ಅನುಕೂಲವಾಗಲಿದೆ. ಜಿ.ಎಸ್.ಬಸವರಾಜು, ಸಂಸದ ಹೆಚ್ಚುವರಿ ರೈಲುಗಳು ಹಾಗೂ ಮೆಮು ರೈಲು ಸಂಚಾರ ಆರಂಭಿಸುವಂತೆ ಮನವಿ ಪೂರ್ವಕ ಒತ್ತಾಯ ಮಾಡಿತ್ತಲ್ಲದೆ, ಸರಣಿ ಟ್ವೀಟ್‌ಗಳ ಮೂಲಕ, ರೈಲುಗಳಲ್ಲಿ ಪ್ರಯಾಣಿಕರ ಒತ್ತಡವನ್ನು ದೃಶ್ಯಗಳ ಮೂಲಕ ಮನವರಿಕೆ ಮಾಡಿಕೊಡಲಾಗಿತ್ತು. ಇದಕ್ಕೆ ಸ್ಪಂದಿಸಿ ಪ್ರಯಾಣಿಕರ ಹಿತದೃಷ್ಟಿಯಿಂದ ಹೆಚ್ಚುವರಿ ರೈಲುಗಳ ಸಂಚಾರ ಹಾಗೂ ಮೆಮು ರೈಲು ಸಂಚಾರ ಆರಂಭಿಸಲಾಗಿದೆ. ಕರಣಂ ರಮೇಶ್, ಪ್ರಧಾನ ಕಾರ್ಯದರ್ಶಿ, ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ