ತುಮಕೂರು : 2020-2021ನೇ ಸಾಲಿನಲ್ಲಿ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 507 ಕಳವು ಪ್ರಕರಣ ಪತ್ತೆ ಹಚ್ಚಿರುವ ಜಿಲ್ಲೆಯ ಪೊಲೀಸರು ಒಟ್ಟು 9.5 ಕೋಟಿ ರೂಪಾಯಿ ಮೌಲ್ಯದ ಕಳವು ಮಾಲು ವಶಪಡಿಸಿಕೊಂಡಿದ್ದಾರೆ.
ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಚಿನ್ನಾಭರಣ, ನಗದು ಪ್ರದರ್ಶನದ ಜತೆಗೆ ಸ್ವತ್ತು ಕಳೆದುಕೊಂಡವರಿಗೆ ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ಮಾಲು ಹಸ್ತಾಂತರಿಸಿದರು. ಈ ವೇಳೆ ಚಿನ್ನಾಭರಣ ಕಳೆದುಕೊಂಡವರು ಸ್ವತ್ತು ಸ್ವೀಕರಿಸಿದ ಬಳಿಕ ಭಾವುಕರಾಗಿದ್ದರು.
11 ಕೆಜಿ ಚಿನ್ನಾಭರಣ: ಈ ಎರಡು ವರ್ಷಗಳಲ್ಲಿ ಒಟ್ಟು 11 ಕೆಜಿ 968 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 4 ಕೋಟಿ 86 ಲಕ್ಷ ರೂಪಾಯಿ. 17 ಕೆಜಿಯಷ್ಟು ಬೆಳ್ಳಿಯ ಆಭರಣ, 147 ದ್ವಿಚಕ್ರವಾಹನ ಹಾಗೂ 28 ನಾಲ್ಕು ಚಕ್ರದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಮಂಗಳವಾರ ನಗರದ ಪೊಲೀಸ್ ಸಮುದಾಯ ಭವನ ‘ಚಿಲುಮೆ’ಯಲ್ಲಿ ಪ್ರದರ್ಶನಕ್ಕಿಟ್ಟಿದ್ದರು.
ಯಶಸ್ವಿಗೆ ಟೀಂ ವರ್ಕ್ !: ಒಂದು ಸಂಸ್ಥೆಯಾಗಲಿ, ಕುಟುಂಬವಾಗಲಿ ಯಾವುದೇ ಯಶಸ್ಸು ಗಳಿಸಲು ಪರಸ್ಪರ ಆತ್ಮೀಯತೆ ಇರಬೇಕು. ಜತೆಗೆ ಟೀಂ ವರ್ಕ್ ಇರಬೇಕು. ಹಾಗಾದಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಕೇಂದ್ರವಲಯ ಐಜಿಪಿ ಕೆ.ಚಂದ್ರಶೇಖರ್ ಹೇಳಿದರು.
ಟೀಂ ವರ್ಕ್, ಮೇಲಾಧಿಕಾರಿಗಳ ಮೇಲೆ ಪೇದೆ, ಮುಖ್ಯಪೇದೆಗಳಿಗೆ ವಿಶ್ವಾಸವಿದೆ. ಪೊಲೀಸರ ಈ ಕಾರ್ಯಕ್ಕೆ ಪ್ರಚಾರ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಸ್ವತ್ತ್ತುಗಳನ್ನು ಕಳೆದುಕೊಂಡವರಿಗೆ ಮರಳಿ ನೀಡಿದಾಗ ಮತ್ತು ಅದನ್ನು ಕಳೆದುಕೊಂಡವರು ವಸ್ತುಗಳನ್ನು ಪಡೆದ ಸಂದರ್ಭದಲಾಗುವ ಭಾವೋದ್ವೇಗದ ಮಾತುಗಳನ್ನು ಕೇಳಿದಾಗ ಒಳ್ಳೆಯ ಕೆಲಸ ಮಾಡಿದ ಸಂತೋಷ, ತೃಪ್ತಿ,ಪ್ರೋತ್ಸಾಹ ಬರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಿನಿ ಸರ್ಜಿಕಲ್ ಸ್ಟ್ರೈಕ್ : ರಾಜ್ಯದ, ಜಿಲ್ಲೆಯ ಗಡಿ ದಾಟಿ ಕಳ್ಳರು, ದರೋಡೆಕೋರರನ್ನು ಹಿಡಿದು ತಂದಿರುವುದು ಕಡಿಮೆ ಸಾಧನೆಯಲ್ಲ.
ಕುಖ್ಯಾತ ಸ್ಥಳಗಳಲ್ಲಿ ಅಡಗಿ ಕುಳಿತಿದ್ದವರ ಮೇಲೆ ಪೊಲೀಸರು ಮಿನಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ ಎಂದು ಚಂದ್ರಶೇಖರ್ ಬೆನ್ನುತಟ್ಟಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ್, ಎಎಸ್ಪಿ ಟಿ.ಜೆ.ಉದೇಶ್, ಡಿವೈಎಸ್ಪಿಗಳಾದ ಶ್ರೀನಿವಾಸ್, ರಮೇಶ್, ರಾಮಕೃಷ್ಣಯ್ಯ, ಗೋವಿಂದಯ್ಯ, ಕುಮಾರಪ್ಪ ಇದ್ದರು.
ರಿಯಲ್ ಹಿರೋಸ್ ! : ಪ್ರಾಣದ ಹಂಗು ತೊರೆದು ಮಫ್ತಿಯಲ್ಲಿ ಸರಗಳ್ಳರ ಗ್ಯಾಂಗ್ ಹಿಡಿದ ಪ್ರೊಬೆಷನರ್ ಎಸ್ಸೈ ಗಳಾದ ಟಿ.ಮೂರ್ತಿ ಹಾಗೂ ಕೆ.ವಿ.ಮೂರ್ತಿ ಕಾರ್ಯ ಶ್ಲಾಘನೀಯ. ಮುಖ್ಯಪೇದೆ ಮೋಹನ್‌ಕುಮಾರ್ ಸಹ ಉತ್ತಮ ಕೆಲಸ ಮಾಡಿದ್ದಾರೆ. ಇವರೇ ನಮ್ಮ ನಡುವಿನ ರಿಯಲ್ ಹಿರೋಗಳು. ಪ್ರತೀ ಪೇದೆಗಳಿಗೆ ಈ ಶ್ರೇಯ ಸಲ್ಲಬೇಕು. ಕುಣಿಗಲ್ ಉಪವಿಭಾಗ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕರೊನಾ ಸಂಕಷ್ಟದಲ್ಲೂ ಅಪಾಯ ಮೈಮೇಲೆ ಎಳೆದುಕೊಂಡು ಹೊರರಾಜ್ಯಗಳಿಗೆ ತೆರಳಿ ಕಳ್ಳರನ್ನು ಹಿಡಿದು ತಂದಿದ್ದಾರೆ. ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ ಸೇರಿ ಕೆಲವು ಕಡೆ ಹೋಗಿ ಕಳ್ಳರ ಅಡಗುತಾಣಗಳಿಗೆ ನುಗ್ಗಿ ಬಂಧಿಸಿ ಕರೆತಂದಿದ್ದಾರೆ. ಪ್ರಕರಣಗಳನ್ನು ಪತ್ತೆಹಚ್ಚಬೇಕೆಂಬ ಛಲ ಅಂತರ್ಗತವಾಗಿ ಬರಬೇಕು. ಎಂ.ಚಂದ್ರಶೇಖರ್ ಕೇಂದ್ರವಲಯ ಐಜಿಪಿ