ಜಿಲ್ಲೆ

ತುಮಕೂರು ಜಿಲ್ಲೆಯಲ್ಲಿ ರಸ್ತೆಗಿಳಿಯಲಿವೆ ಬಸ್‌ಗಳು

Tumakuru

ತುಮಕೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ 2 ತಿಂಗಳಿನಿಂದ ಗೂಡು ಸೇರಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಮಂಗಳವಾರದಿಂದ ಮತ್ತೆ ರಸ್ತೆಗಿಳಿಯಲಿವೆ.

ಮಾ.22ರಂದು ಜನತಾಕರ್ಫ್ಯೂ ಜಾರಿಯಾದಾಗ ಸ್ಥಗಿತಗೊಂಡಿದ್ದ ಸಾರಿಗೆ ಬಸ್ ಸೇವೆ ಪುನರಾರಂಭಗೊಳ್ಳಲಿದ್ದು ಹಂತ, ಹಂತವಾಗಿ ಬಸ್‌ಗಳು ಸಂಚಾರ ಆರಂಭಿಸಲಿವೆ. ಪ್ರತೀ ಬಸ್‌ನಲ್ಲಿ 30 ಪ್ರಯಾಣಿಕರಿಗಷ್ಟೇ ಪ್ರಯಾಣಕ್ಕೆ ಅವಕಾಶ ಇರಲಿದೆ. ಲಾಕ್‌ಡೌನ್ 4.0 ಚರಣ ಆರಂಭದ ಜತೆಜತೆಗೆ ಕರೊನಾ ಸೋಂಕು ಹರಡುವ ಭೀತಿ ನಡುವೆಯೂ ಲಾಕ್‌ಡೌನ್ ನಿಯಮಗಳಲ್ಲಿ ಕೆಲವು ಸಡಿಲಿಕೆ ನೀಡಲಾಗಿದ್ದು, ಬಸ್ ಕಾರ್ಯಾಚರಣೆ ಆರಂಭಿಸಲಾಗಿದೆ.

ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರದಿಂದ ಸಂಚರಿಸಲಿರುವ ಎಲ್ಲ ಬಸ್‌ಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸೇಷನ್‌ಗೊಳಿಸಲಾಗಿದೆ. ತುಮಕೂರು ವಿಭಾಗದ ವ್ಯಾಪ್ತಿಯಲ್ಲಿ 620 ಬಸ್‌ಗಳಿದ್ದು ಪ್ರಾರಂಭಿಕವಾಗಿ 150 ಬಸ್‌ಗಳ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರ ಬೇಡಿಕೆಗನುಗುಣವಾಗಿ ಬಸ್ ಕಾರ್ಯಾಚರಣೆ ಸಂಖ್ಯೆ ಹೆಚ್ಚಿಸುವ ಸಾಧ್ಯತೆ ಇದೆ.

ಹೆಲ್ತ್ ಫಿಟ್‌ನೆಸ್: ಕರ್ತವ್ಯಕ್ಕೆ ನಿಯೋಜಿಸಲಾಗುವ ಬಸ್ ಚಾಲಕರು ಹಾಗೂ ನಿರ್ವಾಹಕರ ಸುರಕ್ಷತಾ ದೃಷ್ಟಿಯಿಂದ ಪ್ರತಿಯೊಬ್ಬ ಸಿಬ್ಬಂದಿಗೂ ಸ್ಯಾನಿಟೈಸರ್, ಮಾಸ್ಕ್ ಹಾಗೂ ಮುಖಗವಸು ಹಾಗೂ ಕೈಗವಸುಗಳನ್ನು ನೀಡಲಾಗುವುದು. ವೈದ್ಯಕೀಯ ತಪಾಸಣೆಗೊಳಪಡಿಸಿ ಪ್ರಮಾಣ ಪತ್ರ ಪಡೆದ ನಂತರವೇ ಬಸ್ ಚಾಲಕರು ಹಾಗೂ ನಿರ್ವಾಹಕರನ್ನು ಪ್ರಯಾಣಿಕರ ಸೇವೆಗೆ ನಿಯೋಜಿಸಲಾಗುವುದು.

ನಗರ ಬಸ್‌ನಿಲ್ದಾಣದಿಂದ ಬೆಳಗ್ಗೆ 7 ಗಂಟೆಯಿಂದ ಬಸ್ ಸಂಚಾರ ಪ್ರಾರಂಭವಾಗಲಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ ಕರೊನಾ ಕೆಂಪುವಲಯ ಹೊರತುಪಡಿಸಿ ತುಮಕೂರು ವಿಭಾಗದ ಸೇವಾ ವ್ಯಾಪ್ತಿಗೆ ಬರುವ ಜಿಲ್ಲೆಯ ಎಲ್ಲ ತಾಲೂಕು ಸೇರಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ಮತ್ತಿತರ ಸ್ಥಳಗಳಿಗೆ ಬಸ್ ಸೇವೆ ಆರಂಭಿಸಲಾಗುವುದು. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳು ರಸ್ತೆಗಿಳಿಯಲಿವೆ. ಬಸ್‌ನಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಪ್ರಯಾಣಿಕರನ್ನು ಬಸ್ ಹತ್ತುವ ಮುನ್ನ ಸ್ಯಾನಿಟೈಸೇಷನ್‌ಗೊಳಿಸಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೊಳಪಡಿಸಲಾಗುವುದು. ಪ್ರತಿ ಬಸ್‌ನಲ್ಲಿ ಗರಿಷ್ಠ 30 ಪ್ರಯಾಣಿಕರು ಪ್ರಯಾಣಿಸಲು ಅವಕಾಶವಿದೆ. 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ ಮಕ್ಕಳಿಗೆ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ ಇಲ್ಲ.

ಪ್ರಯಾಣಿಕರ ಸ್ಕ್ರೀನಿಂಗ್ : ನಗರದ ರಾಜ್ಯ ರಸ್ತೆ ಸಾರಿಗೆ ಬಸ್‌ನಿಲ್ದಾಣದ ಎರಡೂ ಪ್ರವೇಶ ದ್ವಾರಗಳಲ್ಲಿ ಪ್ರಯಾಣಿಕರಿಗೆ ಸ್ಕ್ರೀನಿಂಗ್ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಕೇಂದ್ರಗಳ ನಿಲ್ದಾಣಗಳಲ್ಲೂ ತಪಾಸಣೆ ಇರಲಿದೆ. ಪ್ರತಿ ಪ್ರಯಾಣಿಕರು ಪರಸ್ಪರ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವೃತ್ತಾಕಾರದ ಗುರುತು ಮಾಡಲಾಗಿದೆ. ಪ್ರಯಾಣಿಕರು ಜನಜಂಗುಳಿಯಾಗದಂತೆ ಗುಂಪುಗೂಡದಂತೆ ನಿಗಾವಹಿಸಲು ಸಿಬ್ಬಂದಿ ನಿಯೋಜಿಸಲಾಗಿದೆ.

ತಾಲೂಕು, ಅಂತರ ಜಿಲ್ಲೆ ಬಸ್ ಸೇವೆ ಜತೆಗೆ ನಗರ ಸಾರಿಗೆ ಬಸ್ ಸೇವೆಯನ್ನು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಇರಲಿದೆ. ಹೆಗ್ಗರೆ-ಕ್ಯಾತಸಂದ್ರ, ಶೆಟ್ಟಿಹಳ್ಳಿ-ಯಲ್ಲಾಪುರ, ಗೂಳಹರಿವೆ ಪ್ರಯಾಣಿಕರ ಸಂಖ್ಯೆ ಮೇಲೆ ಬಸ್ ಹೆಚ್ಚಿಸಲಾಗುವುದು. ಬಸ್‌ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರ ವಿವರ, ವಿಳಾಸ, ಮೊಬೈಲ್ ನಂಬರ್ ಪಡೆಯಲಾಗುವುದು. ಪ್ರಯಾಣಿಕರು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತರಲು ಸೂಚಿಸಲಾಗಿದೆ. ಎ.ಎಸ್.ಗಜೇಂದ್ರಕುಮಾರ್ ವಿಭಾಗೀಯ ನಿಯಂತ್ರಣಾಧಿಕಾರಿ, ತುಮಕೂರು