ಜಿಲ್ಲೆ

ತುಮಕೂರು ಜಿಲ್ಲೆಯ ಎಲ್ಲ ಕೆರೆಗಳಿಗೆ ಹರಿಯಲಿದೆ ಹೇಮೆ ನೀರು : ಸಂಸದ ಜಿ.ಎಸ್.ಬಸವರಾಜು

ಎಂ.ಎನ್.ಕೋಟೆ: ಹೇಮೆ ಹರಿಸಿಕೊಳ್ಳುವ ವಿಚಾರದಲ್ಲಿ ಕಳೆದ ಬಾರಿ ಹಾಸನದಲ್ಲಿ ದೇವೇಗೌಡರ ಮಕ್ಕಳ ರಾಜಕಾರಣದಿಂದ 18.5 ಟಿಎಂಸಿ ನೀರು ಸಿಕ್ಕಿತ್ತು. ಈ ಬಾರಿ ಜಿಲ್ಲೆಯತ್ತ ಹರಿಸಲಾಗುತ್ತಿರುವ ಹೇಮೆಯನ್ನು ನಮ್ಮ ಪಾಲಿನ ಸಂಪೂರ್ಣ 25 ಟಿಎಂಸಿ ನೀರನ್ನು ಹರಿಸಿಕೊಳ್ಳುತ್ತೇವೆ ಎಂದು ಸಂಸದ ಜಿ.ಎಸ್.ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು.

ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿಯಲ್ಲಿ ಶನಿವಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಬಾರ್ಡ್‌ನ 22 ಲಕ್ಷ ರೂಪಾಯಿ ವೆಚ್ಚದ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೇಮಾವತಿ ಬಳಸಿಕೊಳ್ಳುವ ಎಲ್ಲ ಕೆರೆಗಳಿಗೆ ನೀರು ಹರಿಸಿ, 18 ಟಿಎಂಸಿ ನೀರಿನಲ್ಲೇ ಬಹುತೇಕ ಕೆರೆಗಳಿಗೆ ನೀರು ನೀಡಲಾಗಿತ್ತು. ಈ ಬಾರಿ ನಿಯಮಾನುಸಾರ ಎಲ್ಲ ಕೆರೆಗಳನ್ನೂ ಭರ್ತಿ ಮಾಡುವ ಭರವಸೆ ನೀಡಿದರು.

ಕಡಬ ಕೆರೆ ಕಳೆದ ಬಾರಿಯೇ ತುಂಬಿಸಲಾಗುತ್ತಿತ್ತು. ಇಲ್ಲಿನ ಕೆಟ್ಟ ರಾಜಕಾರಣದಿಂದ ಕಡಬ ಕೆರೆಗೆ ನೀರು ಕಡಿಮೆಯಾಯಿತು. ಕಡಬ ಕೆರೆ ತುಂಬಿಸುವ ಎಲ್ಲ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಕೊಬ್ಬರಿಗೆ ಸಾವಿರ ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿರುವುದು ಸಾರ್ಥಕ ಎನಿಸಿದೆ. ಕರೊನಾ ಮತ್ತು ನೆರೆಹಾವಳಿ ಮಧ್ಯೆ ರೈತರ ಪರ ನಿಂತ ರಾಜ್ಯ ಸರ್ಕಾರ ಕೊಬ್ಬರಿಗೆ ಬೆಂಬಲ ನೀಡಿದೆ. ಮತ್ತಷ್ಟು ನೀಡಲು ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಹೆಚ್ಚಿಸಬೇಕಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ ಎನಿಸಿದೆ ಎಂದರು. ಸುಸಂಸ್ಕೃತ ನಾಲಿಗೆ ಇಲ್ಲದ ಗುಬ್ಬಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಶಾಸಕರಾಗುವ ಮುನ್ನ ಅವರ ಇತಿಹಾಸ ಅವರಿಂದಲೇ ತಿಳಿದುಕೊಳ್ಳಬೇಕಿದೆ. ಅಧಿಕಾರಿಗಳಿಂದ ಹಣ ಪಡೆಯುವ ಸಂಸ್ಕೃತಿ ನನ್ನದಲ್ಲ ಎಂದರು.

ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು ಕೆಲಸ ಮಾಡಿ ಸ್ಥಳೀಯ ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕಿದೆ. ಆದರೆ, ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರಿನಿಂದ ನಿತ್ಯ ಓಡಾಡುವ ಅಧಿಕಾರಿಗಳ ಬಗ್ಗೆ ದೂರುಗಳಿವೆ. ಈ ಬಗ್ಗೆ ಸ್ಥಳೀಯ ಶಾಸಕರು, ಜಿಪಂ ಸದಸ್ಯರು ಮತ್ತು ತಾಪಂ ಸದಸ್ಯರು ಗಮನಹರಿಸಬೇಕಿದೆ. ಜತೆಗೆ ಗ್ರಾಮ ಪಂಚಾಯಿತಿಗಳಲ್ಲಿ ಇಲ್ಲದ ರಾಜಕಾರಣದ ಗುಂಪುಗಳು ಅಧಿಕಾರಿಗಳ ಹಿಡಿತಕ್ಕೆ ಪರದಾಡುತ್ತವೆ. ಈ ಸಮಯದಲ್ಲಿ ಉದ್ಧಟತನ ಪ್ರದರ್ಶಿಸುವ ಅಧಿಕಾರಿಗಳನ್ನು ಸಾರ್ವಜನಿಕರೇ ಹಿಡಿತಕ್ಕೆ ತರಬೇಕಿದೆ. ಪಟ್ಟು ಹಿಡಿದು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯದಲ್ಲಿರಿಸಿಕೊಳ್ಳಬೇಕು. ಈ ಸಂಬಂಧ ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.